'ಮಹಾ' ಸರ್ಕಸ್ಸಿಗೆ ಇಂದು ಸುಪ್ರೀಂ ಕಸಿ

ರಾತ್ರೋರಾತ್ರಿ ಏನೆಲ್ಲಾ ಬೆಳವಣಿಗೆಗಳಾಗಬಹುದು. ನಸುಕಿನಲ್ಲೇ ಸರ್ಕಾರವೊಂದು ಕಣ್ಣು ಬಿಡಬಹುದು. ಚುನಾವಣಾ ಪೂರ್ವ ಮೈತ್ರಿ ಪುಡಿಪುಡಿಯಾಗಬಹುದು. ಚುನಾವಣೋತ್ತರ ಮೈತ್ರಿ ಹತ್ತಿಕ್ಕಲು ಷಡ್ಯಂತ್ರ ನಡೆಯಬಹುದು. ಈ ಎಲ್ಲಾ ಚಮತ್ಕಾರಗಳ ನಡುವೆಯೂ ದೇಶದ ಜನ ನಿರೀಕ್ಷೆ ಇಟ್ಟುಕೊಂಡಿರುವುದು ನ್ಯಾಯಾಂಗದ ಮೇಲೆ. 

Last Updated : Nov 26, 2019, 07:47 AM IST
'ಮಹಾ' ಸರ್ಕಸ್ಸಿಗೆ ಇಂದು ಸುಪ್ರೀಂ ಕಸಿ title=

ನವದೆಹಲಿ: ಮಹಾರಾಷ್ಟ್ರದ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಸೋಮವಾರ ಒಂದೂವರೆ ಗಂಟೆ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿದ್ದು ಇಂದು 10.30ಕ್ಕೆ ಪ್ರಕಟಿಸಲಿದೆ. ಇಂದು ಹೊರಬೀಳುವ ತೀರ್ಪಿನ ಮೇಲೆ ಮಹಾರಾಷ್ಟ್ರ ರಾಜಕಾರಣದ ಮುಂದಿನ ಬೆಳವಣಿಗೆಗಳು ನಿರ್ಧಾರವಾಗಲಿವೆ.

ರಾತ್ರೋರಾತ್ರಿ ಏನೆಲ್ಲಾ ಬೆಳವಣಿಗೆಗಳಾಗಬಹುದು. ನಸುಕಿನಲ್ಲೇ ಸರ್ಕಾರವೊಂದು ಕಣ್ಣು ಬಿಡಬಹುದು. ಚುನಾವಣಾ ಪೂರ್ವ ಮೈತ್ರಿ ಪುಡಿಪುಡಿಯಾಗಬಹುದು. ಚುನಾವಣೋತ್ತರ ಮೈತ್ರಿ ಹತ್ತಿಕ್ಕಲು ಷಡ್ಯಂತ್ರ ನಡೆಯಬಹುದು. ಈ ಎಲ್ಲಾ ಚಮತ್ಕಾರಗಳ ನಡುವೆಯೂ ದೇಶದ ಜನ ನಿರೀಕ್ಷೆ ಇಟ್ಟುಕೊಂಡಿರುವುದು ನ್ಯಾಯಾಂಗದ ಮೇಲೆ. ದೇಶದ ಅತಿ ಎತ್ತರದ ನ್ಯಾಯಾಲಯದ ಎದುರು ಇಂಥದೊಂದು ಪ್ರಸಂಗ ಬಂದಿದ್ದು ಎಲ್ಲರೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಡೆಗೆ ನೋಡುತ್ತಿದ್ದಾರೆ. ತೀರ್ಪಿನ ಬಗ್ಗೆ ನಿರೀಕ್ಷೆಯೂ ಜಾಸ್ತಿ, ಅದು ಉಕ್ಕಿಸುವ ಸಂಚಲನವೂ ಜಾಸ್ತಿ.

ತಿಂಗಳು ಪೂರ್ತಿ ಕನಸು ಕಂಡು ಎಲ್ಲರೂ ಕಣ್ಣು ಬಿಡುವ ವೇಳೆ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್(Devendra Fadnavis) ಸಿಕ್ಕಿದ್ದನ್ನೂ ಧಕ್ಕಿಸಿಕೊಳ್ಳುವರೇ? ಕರುಳ ಬಳ್ಳಿಯ ಸಂಬಂಧಕ್ಕೆ ಕೊಳ್ಳಿ ಇಟ್ಟು, ಅಥವಾ ಹಾಗೆ ನಟಿಸಿ, ಅಥವಾ 'ಇನ್ಯಾವುದೋ ಬಂದದೊಗುವ ಅಪಾಯಕ್ಕೆ ಉಪಾಯವೆಂದೋ' ಬಿಜೆಪಿ ಬಗಿಲಿಗೆ ಬಂದು ನಿಂತ  ಅಜಿತ್ ಪವಾರ್(Ajit Pawar) ಉದ್ದೇಶ ಊರ್ಜಿತವಾದೀತೇ? ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳಲು ಅಳೆದು-ತೂಗಿ ಕಡೆಗೆ ಒಳ-ಹೊರಗಿನ ಒತ್ತಡಕ್ಕೆ ಕರಗಿ ಒಪ್ಪಿಗೆ ಸೂಚಿಸಿದ ಕಾಂಗ್ರೆಸ್ ಗೆ ಒಪ್ಪಿತವಾದ ತೀರ್ಪು ಬರಬಹುದೇ? ನೆಲದಿಂದ ಪಕ್ಷಕ್ಕೆ ಬಲ ತಂದುಕೊಡಬಲ್ಲ ನಾಯಕನನ್ನೇ ಉಚ್ಛಾಟಿಸಿ ಬೇರೆಯದನ್ನೇ ಸಾಧಿಸಿಕೊಳ್ಳಲೊರಟ, ಅಥವಾ ತೆರೆಯ ಹಿಂದಿನಲ್ಲೇ ಎಲ್ಲವನ್ನೂ ಆಡಿಸುತ್ತಿರುವ ಗಡಿಯಾರದ ಎನ್‌ಸಿಪಿ(NCP)ಗೆ ಎಂಥ ಕಾಲ ಬರುವುದೋ? ಚುನಾವಣಾ ಪೂರ್ವ ಅಥವಾ ಮೂರು ದಶಕಗಳ ಮೈತ್ರಿ ಖತಂ ಆದರೂ ಸರಿ, ಬದ್ಧ ವೈರಿಗಳೊಂದಿಗೆ ಸೇರುವುದಾದರೂ ಸರಿ ಮುಖ್ಯಮಂತ್ರಿ ಗಾದಿ ಮೇಲೆ ತಾನೇ ಕೂರಬೇಕೆಂಬ ಹಠ ಸಾಧಿಸುತ್ತಿರುವ ಶಿವಸೇನೆ(Shiv Sena)ಗೆ ಎದ್ದು ನಿಲ್ಲಲಾರದಂತಹ ಪೆಟ್ಟು ಬೀಳುತ್ತೋ ಅಥವಾ ಅದರ ಪಟ್ಟು ಫಲಿಸುತ್ತೋ? ಎಲ್ಲೂ ನಿರ್ಧಾರವಾಗುವುದು ಇಂದಿನ ತೀರ್ಪಿನ ಆಧಾರದ ಮೇಲೆ.

ಸೋಮವಾರ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಜನರಲ್‌ ಸಾಲಿಸಿಟರ್‌ ತುಷಾರ್‌ ಮೆಹ್ತಾ, ರಾಜ್ಯಪಾಲರು ಮೊನ್ನೆ ಮುಂಜಾನೆ‌ ದಿಢೀರನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಎನ್ ಸಿಪಿಯ ಅಜಿತ್ ಪವಾರ್ ಗೆ ಪ್ರಮಾಣ ವಚನ ಬೋಧಿಸಿದ್ದು ಕ್ರಮಬದ್ದವಾಗಿಯೇ ಇತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಆಗಿ ಒಂದು ತಿಂಗಳಾದರೂ ಜನಪ್ರತಿನಿಧಿಗಳ ಸರ್ಕಾರ ಬಾರದಿದ್ದ ಕಾರಣಕ್ಕೆ ಲಘುಬಗೆಯಲ್ಲಿ ಪ್ರಮಾಣವಚನ ಬೋಧಿಸಿದ್ದಾರೆ. ಇದು ಅವರ ವಿವೇಚನಾಧಿಕಾರವಾಗಿದೆ ಎಂದು ಹೇಳಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದ ಮತ್ತು ದೇವೇಂದ್ರ ಫಡ್ನವಿಸ್ ಗೆ ಪ್ರಮಾಣವಚನಕ್ಕೆ ಆಹ್ವಾನಿಸಿದ ಪತ್ರಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಅಜಿತ್‌ ಪವಾರ್‌ ಪರ ವಕೀಲ ಮಣಿಂದರ್‌ ಸಿಂಗ್‌, ಎನ್ ಸಿಪಿ 54 ಶಾಸಕರ ಬೆಂಬಲ ಇದೆ ಎಂದು ಬಿಜೆಪಿ ರಾಜ್ಯಪಾಲರಿಗೆ ಕೊಟ್ಟಿರುವ ಪತ್ರ ಸರಿಯಾಗಿದೆ. ಶರದ್ ಪವಾರ್ ಅವರ ಕುಟುಂಬದಲ್ಲಿ ಒಂದಷ್ಟು ಸಮಸ್ಯೆಗಳಿರುವುದು ನಿಜ ಅದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮ್ಮದೇ ಅಧಿಕೃತವಾದ ಎನ್‌ಸಿಪಿ ಪಕ್ಷ. ಅಜಿತ್‌ ಪವಾರ್‌ರವರೆ ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕ. ಅವರು ಕೊಟ್ಟಿರುವ ಶಾಸಕರ ಪಟ್ಟಿ ಸಾಂವಿಧಾನಿಕವಾಗಿದೆ ಎಂದಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ ಪರ ವಕೀಲ ಮುಕುಲ್ ರೋಹಟಗಿ, ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ ಮೊದಲು ಹಂಗಾಮಿ ಸ್ಪೀಕರ್ ನೇಮಕವಾಗಬೇಕು. ಅವರು ಎಲ್ಲಾ ಶಾಸಕರಿಗೆ ಪ್ರಮಾಣವಚನ ಬೋಧಿಸಬೇಕು. ಆನಂತರ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದ್ದು ಆಗ ನಡೆಯುವ ವಿಶ್ವಾಸಮತಯಾಚನೆ ಸಂವಿಧಾನಿಕ ಮಾನ್ಯತೆ ಹೊಂದುತ್ತದೆ‌. ಅದಕ್ಕಾಗಿ 10 ದಿನಗಳ ಸಮಯ ಬೇಕು ಎಂದು ವಾದ ಮಾಡಿದ್ದಾರೆ.

ಕಾಂಗ್ರೆಸ್‌(Congress) ಪರ ಕಪಿಲ್‌ ಸಿಬಲ್‌, ನವೆಂಬರ್‌ 22ರ ಶುಕ್ರವಾರ ಸಂಜೆ ಸುದ್ದಿಗೋಷ್ಟಿ ನಡೆಸಿ ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್‌ ಮೂರು ಪಕ್ಷಗಳು ಸರ್ಕಾರ ರಚಿಸುವುದಾಗಿ ಘೋಷಿಸಿದ್ದವು. ಆದರೆ ಬೆಳಿಗ್ಗೆಯೇ ಬಿಜೆಪಿ ಸರ್ಕಾರ ರಚನೆಯಾಗಿಬಿಟ್ಟಿದೆ. ಮಹಾರಾಷ್ಟ್ರದಲ್ಲಿ ಆತುರಾತುರವಾಗಿ ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಳ್ಳುವ ತುರ್ತು ಏನಿತ್ತು? ಕುದುರೆ ರೇಸ್‌ನಲ್ಲಿ ಜಾಕಿ ಓಡಿ ಹೋಗಬಹುದು. ಆದರೆ ಕುದುರೆಗಳು ಇನ್ನು ನಮ್ಮ ಬಳಿಯೇ ಇವೆ. ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನೆ ಸೇರಿ 154 ಶಾಸಕರ ಬೆಂಬಲವಿದೆ. 24 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಲು ಕೋರ್ಟ್‌ ಆದೇಶ ನೀಡಬೇಕು ಎಂದಿದ್ದಾರೆ.

ಅಭಿಷೇಕ್‌ ಮನುಸಿಂಘ್ವಿ, ಒಂದು ತಿಂಗಳು ಕಾದ ರಾಜ್ಯಪಾಲರು ಒಂದು ದಿನ ಕಾಯಲಿಲ್ಲ ಏಕೆ? ಎನ್‌ಸಿಪಿ ಶಾಸಕರ ಸಹಿ ಸಂಗ್ರಹಿಸಿದ್ದು ಬೇರೆ ವಿಚಾರಕ್ಕೆ. ಆದರೆ  ಅಜಿತ್ ಪವಾರ್ ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಜಿತ್‌ ಪವಾರ್‌ ಅವರನ್ನು ಎನ್‌ಸಿಪಿ ಶಾಸಕಾಂಗ ನಾಯಕತ್ವದಿಂದ ತೆಗೆಯಲಾಗಿದೆ. ಬಿಜೆಪಿ ಅರ್ಧ ಸತ್ಯ ಹೇಳಿದೆ, ಪ್ರಜಾಪ್ರಭುತ್ವ ಮೇಲೆ ವಂಚನೆ ನಡೆದಿದೆ. ಹಿಂದೆ 24 ಗಂಟೆ ಅಥವಾ 48 ಗಂಟೆಗಳಲ್ಲಿ ಬಹುಮತ ಸಾಬೀತು ಪಡಿಸುವಂತೆ ಆದೇಶಿಸಿದ ಉದಾಹರಣೆಗಳಿವೆ. ಈಗಲೂ ಅದೇ ರೀತಿಯ ಆದೇಶ ನೀಡಿ ಎಂದು ವಾದ ಮಾಡಿದ್ದಾರೆ. ವಾದ - ಪ್ರತಿವಾದ ಆಲಿಸಿರು ಮೂವರು ನ್ಯಾಯಮೂರ್ತಿಗಳು ಯಾವ ರೀತಿ ತೀರ್ಪನ್ನು ನೀಡುತ್ತಾರೆಂಬುದನ್ನು ಕಾದುನೋಡಬೇಕು‌.
 

Trending News