ಬೆಂಗಳೂರು: ಡೆತ್ ನೋಟ್ ಬರೆದಿತ್ತು ವ್ಯಕ್ತಿಯೊಬ್ಬರು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಧಾನಸೌಧದ ಮೂರನೆ ಮಹಡಿಯ ಶೌಚಾಲಯ ಕೊಠಡಿ ಸಂಖ್ಯೆ 332ರಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಚಿಕ್ಕಬಳ್ಳಾಪುರದಲ್ಲಿ ಲೈಬ್ರೇರಿಯನ್ ಆಗಿದ್ದ ಆರ್.ರೇವಣಕುಮಾರ್ ಎಂಬ ವ್ಯಕ್ತಿಯೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಯತ್ನಕ್ಕೂ ಮುನ್ನ ಡೆತ್ ನೋಟ್ ಬರೆದಿರುವ ಆರ್.ರೇವಣಕುಮಾರ್, ನನ್ನ ಸಾವಿಗೆ ರಾಜ್ಯ ಸರ್ಕಾರವೇ ಕಾರಣ. ನಾನು ಸತ್ತ ಮೇಲೆ ನನ್ನ ಅಂತ್ಯ ಸಂಸ್ಕಾರ ಮುಖ್ಯಮಂತ್ರಿಗಳಿಂದಲೇ ನಡೆಯಬೇಕು. ಯಾವುದೇ ಧಾರ್ಮಿಕ ವಿಧಿ ವಿಧಾನದಿಂದ ಅಂತ್ಯಕ್ರಿಯೆ ಮಾಡಬೇಡಿ. ಹೆಣದ ಮೇಲೆ ಹೂವು ಹಾಕಬಾರದು. ಸಾವಿನ ನಂತರ ಮನೆಯಲ್ಲಿ ಫೋಟೋ ಹಾಕಬಾರದು, ಅಳಬಾರದು, ನಮ್ಮೂರ ಕೆರೆಯಲ್ಲಿ ಸೀಮೆಎಣ್ಣೆ, ಕಟ್ಟಿಗೆ, ಬೆಂಕಿ ಪೊಟ್ಟಣ ಬಳಸಿ ಅಂತ್ಯಕ್ರಿಯೆ ಮಾಡಿದರೆ ಸಾಕು. ಇದೇ ನನ್ನ ಕೊನೆಯ ಆಸೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಂದ ಪ್ರಕರಣದ ಮಾಹಿತಿ ಪಡೆದಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ತನಿಖೆಗೆ ಆದೇಶಿಸಿದ್ದಾರೆ.