ಬರೇಲಿ: ಉತ್ತರಪ್ರದೇಶದ ಬರೆಲಿಯ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಆಸ್ಪತ್ರೆ ಸಿಬ್ಬಂದಿಯೇ ಗ್ಯಾಂಗ್ ರೇಪ್ ಮಾಡಿದ ದಾರುಣ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಕಳೆದ 5 ದಿನಗಳ ಹಿಂದೆ ಭಮೋರ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಡಿದ ಪರಿಣಾಮ ಆ ಅಪ್ರಾಪ್ತ ಬಾಲಕಿಯನ್ನು ಸುಭಾಷ್ ನಗರ ಕ್ಷೇತ್ರದ ಬದಾಯೂನ್ ರಸ್ತೆಯಲ್ಲಿರುವ ಮದನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ಐಸಿಯು ನಲ್ಲಿ ರಾತ್ರಿ ವೇಳೆ ಯಾರೂ ಇಲ್ಲದ ವೇಳೆಯಲ್ಲಿ ಆಸ್ಪತ್ರೆಯ ಕಾಂಪೌಂಡರ್ ಮತ್ತು ಇತರ ನಾಲ್ವರು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಕೆಗೆ ಪ್ರಜ್ಞೆ ತಪ್ಪುವ ಇಂಜೆಕ್ಷನ್ ಸಹ ನೀಡಿ, ಆಕೆಯ ಕೈ, ಕಾಲುಗಳನ್ನು ಕಟ್ಟು, ಬಾಯಿಗೆ ಬಟ್ಟೆ ತುರುಕಿ ಸಾಮುಉಹಿಕ ಅತ್ಯಾಚಾರ ಮಾಡಿದ್ದಾಗಿ ಅಪ್ರಾಪ್ತ ಬಾಲಕಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಘಟನೆ ಸಂಬಂಧ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸುಭಾಷ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.