ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಪಾಕಿಸ್ತಾನದ ಆತಿಥ್ಯಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
"ಪಾಕಿಸ್ತಾನದ ಜನರು ಸಂತೋಷವಾಗಿದ್ದಾರೆ. ಆದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಾಜಕೀಯ ಲಾಭಕ್ಕಾಗಿ ಪಾಕಿಸ್ತಾನದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿ, ಅವರ ಆತಿಥ್ಯವನ್ನು ಸ್ವೀಕರಿಸಿದ್ದೇನೆ. ಪಾಕಿಸ್ತಾನದ ಜನರು ಅತೃಪ್ತರಾಗಿದ್ದಾರೆ ಎಂಬುದು ತಪ್ಪು ಮಾಹಿತಿ. ಆದಾಗ್ಯೂ, ಬಿಜೆಪಿ ಸರ್ಕಾರ ತಮ್ಮ ರಾಜಕೀಯ ಲಾಭಕ್ಕಾಗಿ ಪಾಕಿಸ್ತಾನದ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದೆ" ಎಂದು ಪವಾರ್ ಹೇಳಿದ್ದಾರೆ.
ಮುಂಬೈನ ಎನ್‌ಸಿಪಿ ಕೇಂದ್ರ ಕಚೇರಿಯಲ್ಲಿ ಅಲ್ಪಸಂಖ್ಯಾತರ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಗುಂಪು ಹಲ್ಲೆ ಹಾಗೂ ಆರ್ಟಿಕಲ್ 370ರ ಬಗ್ಗೆ ಪ್ರಸ್ತಾಪಿಸುತ್ತಾ, ಈ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ್ದಕ್ಕಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಜಮ್ಮು ಮತ್ತು ಕಾಶ್ಮೀರದ ಜನರಿಗೆ ಕೆಲವು ವಿಶೇಷ ಅಧಿಕಾರಗಳನ್ನು ನೀಡಲು ಈ ಕಾಯ್ದೆ ಅಸ್ತಿತ್ವದಲ್ಲಿತ್ತು. ಆದರೆ, ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ರಾಜ್ಯವನ್ನು ವಿರೋಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಈ ಕ್ರಮದಿಂದಾಗಿ ಕಣಿವೆಯಲ್ಲಿ ಭಯೋತ್ಪಾದನೆ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ" ಎಂದು ಪವಾರ್ ಹೇಳಿದರು.
ಇದೇ ವೇಳೆ, ಮಹಾರಾಷ್ಟ್ರದ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ ಪವಾರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ವಿಫಲರಾಗಿದ್ದಾರೆ. ಈ ಮೂಲಕ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿದ್ದಾರೆ ಟೀಕಿಸಿದರು.