ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನವಾದ ನ.14ರಂದು ರಾಷ್ಟ್ರಾದ್ಯಂತ ಆಚರಿಸಲಾಗುವ ಮಕ್ಕಳ ದಿನಾಚರಣೆ ದಿನಾಂಕವನ್ನು ಡಿಸೆಂಬರ್ 26ಕ್ಕೆ ಬದಲಾವಣೆ ಮಾಡಬೇಕು ಎಂದು ಬಿಜೆಪಿ ಸಂಸದರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಪಶ್ಚಿಮ ದೆಹಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಈ ಬಗ್ಗೆ ಮನವಿ ಪತ್ರ ಬರೆದಿದ್ದು, ಇದಕ್ಕೆ ಇತರೆ 50ಕ್ಕೂ ಹೆಚ್ಚು ಬಿಜೆಪಿ ಸಂಸದರು ಸಹಿ ಹಾಕಿದ್ದಾರೆ. "ಜವಾಹರ್ ಲಾಲ್ ನೆಹರು ಅವರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಮಕ್ಕಳ ಅಭಿವೃದ್ಧಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನೆಹರು ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ನಿಜವಾಗಿ ಮಕ್ಕಳ ದಿನಾಚರಣೆ ಆಚರಿಸಬೇಕಾದದ್ದು, ಡಿಸೆಂಬರ್ 26 ರಂದು. ಅದು ಗುರು ಗೋವಿಂದ್ ಸಿಂಗ್ ಪುತ್ರರಾದ ಶಾಹಿಬ್ಜಾನ್ ಅಜಿತ್ ಸಿಂಗ್(18), ಜುಜ್ಹಾರ್ ಸಿಂಗ್(14), ಜೋರಾವರ್ ಸಿಂಗ್(9) ಮತ್ತು ಫತೇಹ್ ಸಿಂಗ್(7) ಅವರು ಮೊಘಲ ದೊರೆ ಜೌರಂಗಜೇಬ್ ಆಡಳಿತಾವಧಿಯಲ್ಲಿ ಹುತಾತ್ಮರಾದ ದಿನ" ಎಂದು ಮನವಿಯಲ್ಲಿ ಹೇಳಿದ್ದಾರೆ.
ಅಲ್ಲದೆ, "ಜವಾಹರ್ ಲಾಲ್ ನೆಹರು ಅವರನ್ನು ಎಲ್ಲರೂ ಪ್ರೀತಿಯಿಂದ 'ಚಾಚಾ ನೆಹರು' ಎಂದು ಕರೆಯುತ್ತಿದ್ದರು. ಹಾಗಾಗಿ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಬದಲಾಗಿ 'ಚಾಚಾ ದಿವಸ್' ಅಥವಾ 'ಅಂಕಲ್ ಡೇ' ಆಗಿ ಆಚರಿಸಬೇಕು. ಹಾಗೇ ಗುರು ಗೋವಿಂದ್ ಸಿಂಗ್ ಪುತ್ರರು ಹುತಾತ್ಮರಾದ ಡಿಸೆಂಬರ್ 26ನ್ನು ಮಕ್ಕಳ ದಿನಾಚರಣೆ ಆಗಿ ಆಚರಿಸಬೇಕು. ಇದರಿಂದ ಮಕ್ಕಳಿಗೆ ತಮ್ಮ ತಮ್ಮಲ್ಲಿರುವ ಸಾಮರ್ಥ್ಯದ ಬಗ್ಗೆ ಅರಿವಾಗುವುದಲ್ಲದೆ, ತಪ್ಪುಗಳ ವಿರುದ್ಧ ಹೋರಾಡುವ ಶಕ್ತಿ ದೊರೆಯುತ್ತದೆ ಎಂದು ಸಂಸದರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.