ನವದೆಹಲಿ: ಇತ್ತೀಚೆಗೆ ಭಾರತ ಮತ್ತು ಚೀನಾ (Indo-China) ದೇಶಗಳ ಗಡಿಯಲ್ಲಿ ಉದ್ವಿಗ್ಘ ವಾತಾವರಣ ಕಂಡುಬಂದಾಗಿನಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಏಕಾಂಗಿಯಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು, ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಾ ಬಂದಿದ್ದರು. ವಸ್ತುಸ್ಥಿತಿ ವಿವರಿಸುವಂತೆ ಒತ್ತಾಯಿಸುತ್ತಿದ್ದರು. ಕಳೆದ ಸೋಮವಾರ ಗಡಿಯಲ್ಲಿ ಸೈನಿಕರ ಘರ್ಷಣೆ ಆಗಿ 20 ಮಂದಿ ಭಾರತೀಯ ಸೈನಿಕರು ಮೃತಪಟ್ಟ ಬಳಿಕ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ಕೂಡ ಪ್ರಶ್ನಿಸಿದ್ದರು. ಈಗ ಕೇಂದ್ರದ ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಸರದಿ.
ಪಿ. ಚಿದಂಬರಂ (P Chidambaram) ಅವರು ಇಂದು ಸರಣಿ ಟ್ವೀಟ್ ಮಾಡಿ 'ಚೀನಾ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿಲ್ಲ' ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಪ್ರಶ್ನೆ ಮಾಡಿದ್ದಾರೆ. ಪಿ. ಚಿದಂಬರಂ ಅವರ ಪ್ರಶ್ನೆಗಳು ಈ ರೀತಿ ಇವೆ.
* ಚೀನಾ ಭಾರತದ ಭೂಪ್ರದೇಶ ವಶಪಡಿಸಿಕೊಂಡಿಲ್ಲ ಎಂಬುದು ಸತ್ಯವೇ? ಹಾಗಿದ್ದರೆ ಮೇ 5 ಮತ್ತು 6ರಂದು ಭಾರತ-ಚೀನಾ ಗಡಿಯಲ್ಲಿ ಏನು ನಡೆಯಿತು? ಜೂನ್ 16 ಮತ್ತು 17ರಂದುದು ಸೈನಿಕರ ನಡುವೆ ಸಂಘರ್ಷ ಆಗಿದ್ದು ಏಕೆ? 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದೇಕೆ?
PM said there is no foreigner (meaning Chinese) in Indian territory. If this is true, what was the fuss about May 5-6? Why was there a fight between troops on June 16-17? Why did India lose 20 lives?
— P. Chidambaram (@PChidambaram_IN) June 20, 2020
* ಚೀನಾ ಸೈನ್ಯ ಭಾರತದ ಭೂಭಾಗದೊಳಕ್ಕೆ ನುಸಿಳಿಲ್ಲವೇ? ಹಾಗಿದ್ದರೆ ಜೂನ್ 6 ರಂದು ಎರಡೂ ದೇಶದ ಕಾರ್ಪ್ಸ್ ಕಮಾಂಡರ್‌ಗಳು ಏನು ಚರ್ಚೆ ಮಾಡಿದರು? ಅವರು ಹವಾಮಾನದ ಬಗ್ಗೆ ಚರ್ಚೆ ನಡೆಸಿದರಾ?
* ಚೀನಾ ದೇಶದ ಸೇನೆ ಎಲ್‌ಎಸಿ ದಾಟಿ ಭಾರತೀಯ ಭೂಪ್ರದೇಶಕ್ಕೆ ಬಂದಿಲ್ಲವೇ? ಹಾಗಿದ್ದರೆ ವಿದೇಶಾಂಗ ಸಚಿವ ಎಸ್. ಜೈಶಂಕರ್ 'ಯಥಾಸ್ಥಿತಿ ಪುನಃಸ್ಥಾಪನೆ' ಮಂತ್ರ ಪಠಿಸಿದ್ದೇಕೆ?
* ಚೀನಾ ಭಾರತದ ಭೂಭಾಗಕ್ಕೆ ಬಂದಿಲ್ಲದಿದ್ದರೆ ಅಥವಾ ಗಡಿ ಒಪ್ಪಂದ ಉಲ್ಲಂಘನೆ ಮಾಡಿಲಲ್ಲದಿದ್ದರೆ ಎರಡೂ ದೇಶಗಳ ಸೈನ್ಯಗಳನ್ನು ತೆರವುಗೊಳಿಸುವ ಬಗ್ಗೆ ಇಷ್ಟೊಂದು ಚರ್ಚೆ ನಡೆಸಿದ್ದೇಕೆ?
* ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆಯೇ? ಕ್ಲೀನ್ ಚಿಟ್ ನೀಡುವುದಾದರೆ ಚೀನಾದೊಂದಿಗೆ ಮಾತುಕತೆ ನಡೆಸುವ ಅಗತ್ಯ ಏನು?
ಮೇಜರ್ ಜನರಲ್ ಗಳು ಮಾತುಕತೆ ನಡೆಸುತ್ತಿರುವುದು ಏಕೆ? ಅವರು ಯಾವುದರ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ?