ನವದೆಹಲಿ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಡೊಮ್ಕಲ್ ಪುರಸಭೆ ಪ್ರದೇಶದ ನೂರಾರು ಜನರು ಬುಧವಾರ ಬೆಳಿಗ್ಗೆ ಆಹಾರವಿಲ್ಲದಿದ್ದರಿಂದಾಗಿ ಮೂರು ಗಂಟೆಗಳ ಕಾಲ ರಾಜ್ಯ ಹೆದ್ದಾರಿಯನ್ನು ತಡೆ ಹಿಡಿದರು.
ಲಾಕ್ಡೌನ್ ಆದೇಶಗಳನ್ನು ಉಲ್ಲಂಘಿಸಿ ಬರ್ಹಾಂಪೋರ್-ಡೊಮ್ಕಲ್ ರಾಜ್ಯ ಹೆದ್ದಾರಿಯನ್ನು ನಿರ್ಬಂಧಿಸಿದ 400 ಕುಟುಂಬಗಳ ಸದಸ್ಯರಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಇದ್ದರು. ಹೆಚ್ಚಿನ ಜನರು ಮುಖವಾಡ ಧರಿಸುವುದಾಗಲಿ ಅಥವಾ ಸಾಮಾಜಿಕ ದೂರ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಮಾಡಲಿಲ್ಲ ಎನ್ನಲಾಗಿದೆ.ಸ್ಥಳೀಯ ಆಡಳಿತವು ಮಧ್ಯಪ್ರವೇಶಿಸಿದಾಗ ಜನರು ದಿಗ್ಬಂಧನವನ್ನು ಹಿಂತೆಗೆದುಕೊಂಡರು, ಇದೇ ವೇಳೆ ಸ್ಥಳಕ್ಕೆ ಧಾವಿಸಿದ ಡೊಮ್ಕಲ್ ಪುರಸಭೆಯ ಅಧ್ಯಕ್ಷರು, ಪಡಿತರ ವಿತರಕರು ಬಡತನ ರೇಖೆ (ಬಿಪಿಎಲ್) ವಿಭಾಗದಲ್ಲಿ ಇರುವವರಿಗೆ ಆಹಾರ ಸರಬರಾಜಿನ ಕೋಟಾವನ್ನು ವಿತರಿಸಲಿಲ್ಲ ಎಂದು ಒಪ್ಪಿಕೊಂಡರು. ಪ್ರತಿ ಪಡಿತರ ಚೀಟಿ ಹೊಂದಿರುವವರು ತಿಂಗಳಿಗೆ ಐದು ಕೆಜಿ ಅಕ್ಕಿ ಮತ್ತು ಐದು ಕೆಜಿ ಹಿಟ್ಟು ಪಡೆಯಬೇಕಾಗುತ್ತದೆ.
ಕಳೆದ ವಾರ ಪಶ್ಚಿಮ ಬಂಗಾಳದ ರಾಜ್ಯ ಆಹಾರ ಮತ್ತು ಸರಬರಾಜು ಸಚಿವ ಜ್ಯೋತಿಪ್ರಿಯೋ ಮಲ್ಲಿಕ್, “ಬಂಗಾಳದಲ್ಲಿ ಅಕ್ಕಿಯ ಕೊರತೆಯಿಲ್ಲ. ನಮ್ಮಲ್ಲಿ 9.45 ಲಕ್ಷ ಮೆಟ್ರಿಕ್ ಟನ್ ಸಂಗ್ರಹವಿದೆ ಮತ್ತು ಇನ್ನೂ ನಾಲ್ಕು ಲಕ್ಷ ಮೆಟ್ರಿಕ್ ಟನ್ ಅಕ್ಕಿ ಗಿರಣಿಗಳಲ್ಲಿ ಸಂಗ್ರಹವಾಗಿದೆ. ಆಗಸ್ಟ್ ವರೆಗೆ ಜನರಿಗೆ ಆಹಾರ ನೀಡಲು ನಮ್ಮಲ್ಲಿ ಸಾಕಷ್ಟು ಅಕ್ಕಿ ಇದೆ. ನಮ್ಮ ಸರ್ಕಾರ ಭಾರತದ ಆಹಾರ ನಿಗಮದಿಂದ ಅಕ್ಕಿ ಸಂಗ್ರಹಿಸುವುದಿಲ್ಲ. ನಾವು ರೈತರಿಂದ ನೇರವಾಗಿ ಖರೀದಿಸುತ್ತೇವೆ' ಎಂದು ಹೇಳಿದ್ದರು.ಕೆಲವು ಪಡಿತರ ವಿತರಕರು ತಮ್ಮ ಅಂಗಡಿಗಳನ್ನು ತೆರೆಯದಿರುವುದಕ್ಕೆ ಅಥವಾ ಜನರಿಗೆ ಪೂರ್ಣ ಕೋಟಾ ನೀಡದ ಕಾರಣ ಆಡಳಿತವು ಕ್ರಮ ಕೈಗೊಂಡಿದೆ ಎಂದು ಸಚಿವರು ಹೇಳಿದರು.
ಡೊಮ್ಕಲ್ ಪುರಸಭೆಯ ವಾರ್ಡ್ ಸಂಖ್ಯೆ 10 ರ ನಿವಾಸಿ ಮಹಾದೇಬ್ ದಾಸ್, “ನಮ್ಮ ಪ್ರದೇಶದ ಪಡಿತರ ವ್ಯಾಪಾರಿ ದುಲಾಲ್ ಸಹಾ ಅವರು ಕಳೆದ ಎರಡು ವಾರಗಳಲ್ಲಿ ಬೆರಳೆಣಿಕೆಯ ಕುಟುಂಬಗಳಿಗೆ ತಲಾ ಒಂದು ಕಿಲೋ ಅಕ್ಕಿ ನೀಡಿದರು. 4-5 ಸದಸ್ಯರ ಕುಟುಂಬವನ್ನು ಪೋಷಿಸಲು ಇದು ಸಾಕಾಗುವುದಿಲ್ಲ' ಎಂದು ತಮ್ಮ ಅಳಲು ತೋಡಿಕೊಂಡರು.
'ಈ ಪ್ರದೇಶದ ಹೆಚ್ಚಿನ ಜನರು ಬಂಗಾಳ ಅಥವಾ ಇತರ ರಾಜ್ಯಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಲಾಕ್ ಡೌನ್ ಆಗಿದ್ದರಿಂದ ನಾವು ನಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದೇವೆ. ರಾಜ್ಯ ಮತ್ತು ಕೇಂದ್ರವು ಬಡವರಿಗೆ ಉಚಿತ ಆಹಾರವನ್ನು ನೀಡುತ್ತಿದೆ ಎಂದು ನಮಗೆ ತಿಳಿಸಲಾಯಿತು, ”ಎಂದು ಅವರು ಹೇಳಿದರು. ಮತ್ತೊಬ್ಬ ವ್ಯಕ್ತಿ ಮಾತನಾಡಿ 'ಸರ್ಕಾರ ನಮಗೆ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ನಾವು ಹಸಿವಿನಿಂದ ಸಾವನ್ನಪ್ಪಬೇಕೇ? ಆಂದೋಲನಕ್ಕಾಗಿ ಎಷ್ಟೋ ಜನರನ್ನು ಒಟ್ಟುಗೂಡಿಸುವ ಮೂಲಕ ನಾವು ನಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದೇವೆಂದು ನಮಗೆ ತಿಳಿದಿದೆ ಆದರೆ ಯಾವುದೇ ಆಯ್ಕೆ ಇರಲಿಲ್ಲ' ಎಂದರು