ಆಗ್ರಾ : ನಗರದಲ್ಲಿ ಗುರುವಾರ ಬೆಳಿಗ್ಗೆ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ವಿಶ್ವ ಪ್ರಸಿದ್ಧ ತಾಜ್ ಮಹಲ್ ಸ್ಮಾರಕದ ದಕ್ಷಿಣ ಪ್ರವೇಶದ್ವಾರದ ಕಂಬ ಕುಸಿದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ANI ವರದಿ ಮಾಡಿದೆ.
ಈಗಾಗಲೇ ಸ್ಮಾರಕದ ಸಂರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಇಂದು ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಕಂಬ ಕುಸಿದಿದೆ. ಇತ್ತೀಚೆಗೆ, ತಾಜ್ ಮಹಲ್'ಗೆ ಬರುವ ಪ್ರವಾಸಿಗರು ಬೆಳಿಗ್ಗೆಯಿಂದ ಸಂಜೆವರೆಗೂ ಮಹಲಿನ ಒಳಗೇ ಕಾಲ ಕಳೆಯುತ್ತಿದ್ದರಿಂದ 17ನೇ ಶತಮಾನದ ಸ್ಮಾರಕದ ಮೇಲೆ ಮಾನವ ಒತ್ತಡ ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಅಧಿಕಾರಿಗಳು ತಾಜ್ ಮಹಲ್ ಪ್ರವೇಶವನ್ನು ಕೇವಲ ಮೂರು ಗಂಟೆಗಳಿಗೆ ಸೀಮಿತಗೊಳಿಸಿ, ಸ್ಮಾರಕದ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರು.
ಮತ್ತೊಂದು ಘಟನೆಯಲ್ಲಿ ಉತ್ತರ ಪ್ರದೇಶದ ಮಥುರಾದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಮನೆಯ ಚಾವಣಿ ಕುಸಿದು ಮೂರು ಮಕ್ಕಳು ಮೃತಪಟ್ಟಿದ್ದಾರೆ. ಕೂಲಿ ಕೆಲಸಕ್ಕಾಗಿ ಪೋಷಕರು ಹೊರಹೋಗಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಉಳಿದಂತೆ ಲಖನೌ, ಕಾನ್ಪುರ, ಮಥುರಾ, ಕನ್ನೌಜ್, ಫರೂಕಾಬಾದ್, ಇತಾವಾ ಮತ್ತು ಮೇನ್ಪುರಿ ಸೇರಿದಂತೆ ಉತ್ತರಪ್ರದೇಶದ ಹಲವು ಪ್ರದೇಶಗಳಲ್ಲಿ ಮಳೆ ವರದಿಯಾಗಿದೆ. ಹವಾಮಾನದ ಹಠಾತ್ ಬದಲಾವಣೆಯಿಂದಾಗಿ ರೈತರ ಗೋಧಿ ಬೆಳೆ ಸಂಪೂರ್ಣ ಹಾನಿಯಾಗಿದೆ.