ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಮುರಿದುಬಿದ್ದ ಹಿನ್ನೆಲೆಯಲ್ಲಿ ಶೀಘ್ರವಾಗಿ ರಾಜ್ಯಪಾಲರ ಆಡಳಿತ ಜಾರಿಗೆ ತರಲು ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಬುಧವಾರ ಬೆಳಿಗ್ಗೆ ಅನುಮೋದನೆ ನೀಡಿದ್ದಾರೆ. ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ 24 ಗಂಟೆಗಳ ಒಳಗೆ ರಾಜ್ಯಪಾಲರ ಆಡಳಿತ ಜಾರಿಮಾಡಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲ ಎನ್.ಎನ್.ವೋಹ್ರಾ ಅವರು ರಾಜ್ಯಪಾಲರ ಆಳ್ವಿಕೆಗೆ ಶಿಫಾರಸು ಮಾಡಿ ರಾಷ್ಟ್ರಪತಿಗೆ ಪತ್ರ ರವಾನಿಸಿದ್ದರು. ಇದೀಗ ಆ ಅಪ್ತ್ರಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಅಂಕಿತ ಹಾಕಿದ್ದು, ಈ ಕ್ಷಣದಿಂದಲೇ ಜಾರಿಯಾಗುವಂತೆ ಅನುಮೋದಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಗೆ ಬಿಜೆಪಿ ಗುಡ್ ಬೈ; ಮುಖ್ಯಮಂತ್ರಿ ಮೆಹಬೂಬ ಮುಫ್ತಿ ರಾಜೀನಾಮೆ
ಮಂಗಳವಾರ ಮಧ್ಯಾಹ್ನ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳು ಮತ್ತು ಇತರ ವಿಚಾರಗಳಲ್ಲಿ ಭಿನ್ನಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳವಾರ ಮೈತ್ರಿ ಸರ್ಕಾರದಿಂದ ಹೊರಬಂದಿದ್ದು, ಪಿಡಿಪಿಯ ಮೊಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮಂಗಳವಾರ ಸಂಜೆ ರಾಜೀನಾಮೆ ನೀಡಿದ್ದರು.
ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಓಮರ್ ಅಬ್ದುಲ್ಲಾ ಒತ್ತಾಯ
2014ರಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ 25, ನ್ಯಾಷನಲ್ ಕಾನ್ಫರೆನ್ಸ್ 15 ಮತ್ತು ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇತರರು 7 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚಿಸಿದ ಹಿನ್ನೆಲೆಯಲ್ಲಿ ಪಿಡಿಪಿಯ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿದ್ದರು.