ಬಹುದಿನಗಳ ನಂತರದ 'ಹಸೀನಾ' ರ ಅಪ್ಪುಗೆಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಭಾರತದ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Updated: Oct 6, 2019 , 05:23 PM IST
ಬಹುದಿನಗಳ ನಂತರದ 'ಹಸೀನಾ' ರ ಅಪ್ಪುಗೆಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
Photo courtesy: Twitter

ನವದೆಹಲಿ: ಭಾರತದ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಇಂದು ಹಲವು ಕಾಂಗ್ರೆಸ್ ನಾಯಕರ ಭೇಟಿ ಸಂದರ್ಭದಲ್ಲಿ ಶೇಖ್ ಹಸೀನಾ ಅವರು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಇದೇ ಸಂದರ್ಭದಲ್ಲಿ ಶೇಖ್ ಹಸೀನಾ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಆತ್ಮೀಯವಾಗಿ ಅಪ್ಪಿಕೊಂಡರು.

ಈ ಕ್ಷಣದ ಬಗ್ಗೆ ಈಗ ಟ್ವೀಟ್ ನಲ್ಲಿ ಬರೆದುಕೊಂಡಿರುವ ಪ್ರಿಯಾಂಕಾ ಗಾಂಧಿ ' ನಾನು ದೀರ್ಘ ಸಮಯದಿಂದ ಭೇಟಿಯಾಗಲು ಕಾಯುತ್ತಿದ್ದ ಶೇಖ್ ಹಸೀನಾ ಅವರಿಂದ ಭಾವುಕ ಅಪ್ಪುಗೆ. ಅವರ ವೈಯಕ್ತಿಕ ನಷ್ಟ ಮತ್ತು ಕಷ್ಟಗಳ ನಡುವೆ ತಾನು ನಂಬಿದ ವಿಚಾರಗಳಿಗಾಗಿನ ಧೈರ್ಯ ಹಾಗೂ ಪರಿಶ್ರಮದಿಂದ ಹೋರಾಡುವ ಅವರ ಶಕ್ತಿ, ನನಗೆ ಯಾವಾಗಲೂ ಸ್ಫೂರ್ತಿ' ಎಂದು ಟ್ವೀಟ್ ಮಾಡಿದ್ದಾರೆ.

ಶೇಖ್ ಹಸೀನಾ ಬಾಂಗ್ಲಾದೇಶದ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದಾರೆ ಮತ್ತು 2009 ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದರು. ಆಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಮನಮೋಹನ್ ಸಿಂಗ್ ಅವರು 2011 ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ವೇಳೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು.

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ 4 ದಿನಗಳ ಅಧಿಕೃತ ಪ್ರವಾಸದಲ್ಲಿದ್ದು, ಈ ವಾರದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ  ವ್ಯಾಪಾರ, ಸಂಪರ್ಕ ವಿಚಾರವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.