ಮಧ್ಯಪ್ರದೇಶ: 'ಮೇಕ್ ಇನ್ ಇಂಡಿಯಾ' ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು, ಚೀನಾ ಕಂಪನಿಯ ಮೊಬೈಲ್ ಬಳಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಂಡ್ಸೊರ್ ನಲ್ಲಿ ನಡೆದ ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಯುವಕರಿಗೆ ಉದ್ಯೋಗ ಸೃಷ್ಟಿಸುವುದಾಗಿ ಹಾಗೂ ಕೃಷಿ ವಲಯಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದ್ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ ಎಂದು ಹೇಳಿದರು.
ಇನ್ನು, ಮಧ್ಯಪ್ರದೇಶ ರಾಜ್ಯದಲ್ಲಿ ಶಿವರಾಜ್ ಚೌಹಾಣ್ ಅವರ ಬಿಜೆಪಿ ಸರಕಾರ ರೈತ ಆತ್ಮಹತ್ಯೆ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಶ್ರೀಮಂತ ಕೈಗಾರಿಕೋದ್ಯಮಿಗಳೊಂದಿಗೆ ಮಾತುಕತೆಯಲ್ಲಿ ಸದಾ ಬ್ಯುಸಿ ಆಗಿರುವ ಚೌಹಾಣ್ ಅವರು, ಜನಸಾಮಾನ್ಯರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎಂದು ರಾಹುಲ್ ದೂರಿದರು.
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೈತರಿಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡಿದ ರಾಹುಲ್ ಗಾಂಧಿ, "ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ನೀಡಿ ಗೆಲ್ಲಿಸಿದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು. ಯುವಜನತೆಗೆ ಉದ್ಯೋಗ ಸೃಷ್ಟಿ ಹಾಗೂ ರೈತರಿಗೆ ಭದ್ರತೆ ಒದಗಿಸಿ ಜನಸಾಮಾನ್ಯರ ಅಭಿವೃದ್ಧಿಗೆ ಹೆಚ್ಚು ಒಟ್ಟು ನೀಡಲಾಗುವುದು ಎಂದರು. ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್'ಗೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ, ಕಾಂಗ್ರೆಸ್ ಸರ್ಕಾರ ಜನತೆಯ 'ಮನ್ ಕಿ ಬಾತ್'ಗೆ ಆದ್ಯತೆ ನೀಡಲಿದೆ ಎಂದು ರಾಹುಲ್ ಹೇಳಿದರು.