ನವದೆಹಲಿ: ರೈಲ್ವೆ ನಿಲ್ದಾಣ ತಲುಪಿದ ನಂತರ ರಿಸರ್ವೇಶನ್ ಚಾರ್ಟ್ ನೋಡುವ ಅಭ್ಯಾಸ ನಿಮಗೇನಾದರೂ ಇದ್ದಲ್ಲಿ ಅದನ್ನು ಇಂದಿನಿಂದಲೇ ಬದಲಾಯಿಸಿಕೊಳ್ಳಿ! ಏಕೆಂದರೆ ಭಾರತೀಯ ರೈಲ್ವೆ ಇಲಾಖೆಯು ರೈಲುಗಾಡಿಗಳ ಮೇಲೆ ರಿಸರ್ವೇಶನ್ ಚಾರ್ಟ್ ಹಾಕುವುದನ್ನು ನಿಲ್ಲಿಸಲು ನಿರ್ಧಾರ ಕೈಗೊಂಡಿದೆ.
ಈ ನೂತನ ನಿಯಮದ ಪ್ರಕಾರ, ದೇಶದ ಯಾವುದೇ ರೈಲು ನಿಲ್ದಾಣಗಳಲ್ಲಿ ರೈಲುಗಳ ಮೇಲೆ ರಿಸರ್ವೇಶನ್ ಚಾರ್ಟ್ ಹಾಕದಂತೆ ಎಲ್ಲಾ ನಿಲ್ದಾಣಗಳಿಗೆ ರೈಲ್ವೆ ಇಲಾಖೆ ಆದೇಶ ನೀಡಿದೆ. ಈ ಆದೇಶ ಎಲ್ಲಾ ರೈಲ್ವೆ ವಲಯಗಳಲ್ಲಿ ಜಾರಿಗೆ ಬರಲಿದೆ. ಆದರೆ, ರೈಲು ನಿಲ್ದಾಣಗಳ ಪ್ಲಾಟ್ ಫಾರಂಗಳ ಚಾರ್ಟ್ ಬೋರ್ಡ್'ಗಳಲ್ಲಿ ರಿಸರ್ವೇಶನ್ ಚಾರ್ಟ್ ಹಾಕುವ ವ್ಯವಸ್ಥೆ ಮುಂದುವರಿಯಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಡಿಜಿಟಲ್ ಬೋರ್ಡ್ ವ್ಯವಸ್ಥೆ
ನವದೆಹಲಿ, ನಿಜಾಮುದ್ದೀನ್ ರೈಲು ನಿಲ್ದಾಣ ಸೇರಿದಂತೆ ದೇಶದ 6 ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ರಿಸರ್ವೇಶನ್ ಚಾರ್ಟ್ ಸ್ಕ್ರೀನ್'ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಈ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂಗಳಲ್ಲಿ ಹಾಕುತ್ತಿದ್ದ ರಿಸರ್ವೇಶನ್ ಚಾರ್ಟ್ ವ್ಯವಸ್ಥೆಯನ್ನೂ ರದ್ದುಪಡಿಸಲಾಗಿದೆ. ಹೀಗಾಗಿ ದೇಶದ ಬಹುತೇಕ ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ರಿಸರ್ವೇಶನ್ ಚಾರ್ಟ್ ಸ್ಕ್ರೀನ್ ಅಳವಡಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಏಕೆಂದರೆ, ರಿಸರ್ವೇಶನ್ ವ್ಯವಸ್ಥೆಯನ್ನು ಸಂಪೂರ್ಣ ಕಾಗದ ರಹಿತಗೊಳಿಸಲು ರೈಲ್ವೇ ಇಲಾಖೆ ಉದ್ದೇಶಿಸಿದೆ. ಅಷ್ಟೇ ಅಲ್ಲದೆ, ಟಿಕೆಟ್ ರಿಸರ್ವೇಶನ್ ಮಾಡಿದ ಬಹುತೇಕ ಪ್ರಯಾಣಿಕರಿಗೆ ಮೊಬೈಲ್ಗಳಿಗೆ ಸಂದೇಶ ರವಾನಿಸುವ ಮೂಲಕ ರಿಸರ್ವೇಶನ್ ಮಾಹಿತಿಯನ್ನು ರೈಲ್ವೆ ಇಲಾಖೆ ಈಗಾಗಲೇ ನೀಡುತ್ತಿರುವುದೂ ಸಹ ರಿಸರ್ವೇಶನ್ ಚಾರ್ಟ್ ಅಗತ್ಯತೆಯನ್ನು ಕಡಿಮೆಗೊಳಿಸಲಿದೆ.
ಕಳೆದ ಒಂದು ವರ್ಷದಿಂದ ವ್ಯವಸ್ಥೆ ಜಾರಿಗೆ ತಯಾರಿ
ರೈಲ್ವೆ ರಿಸರ್ವೇಶನ್ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಜಾರಿಗೆ ತರಲು ಕಳೆದ ಒಂದು ವರ್ಷದಿಂದ ರೈಲ್ವೆ ಇಲಾಖೆ ತಯಾರಿ ನಡೆಸಿದೆ. ಒಂದು ವರ್ಷದ ಹಿಂದೆಯೇ ರಿಸರ್ವೇಶನ್ ಭೋಗಿಗಳ ಹೊರಗೆ ಚಾರ್ಟ್ ಪ್ರಕಟಿಸುವುದನ್ನು ರದ್ದುಪಡಿಸಲು ಇಲಾಖೆ ನಿರ್ಧರಿಸಿತ್ತು. ಆದರೆ, ಇದುವರೆಗೆ ಕೇವಲ 6 ರೈಲು ನಿಲ್ದಾಣಗಳಲ್ಲಿ ಆದರೆ, ನವದೆಹಲಿ, ಹಜರತ್ ನಿಜಾಮುದ್ದೀನ್, ಮುಂಬೈ ಸೆಂಟ್ರಲ್, ಹವ್ರಾ ಜಂಕ್ಷನ್ ಮತ್ತು ಸಿಯಾಲ್ದಾಹ್ ಜಂಕ್ಷನ್'ಗಳಲ್ಲಿ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಡಿಜಿಟಲ್ ರಿಸರ್ವೇಶನ್ ಚಾರ್ಟ್ ಸ್ಕ್ರೀನ್ ಅಳವಡಿಸಲಾಗಿದೆ.