ನವದೆಹಲಿ: ವಜಾ ಗೊಂಡಿರುವ ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜಮ್ನಾ ಗರ್ ನ್ಯಾಯಾಲಯವು 30 ವರ್ಷ ಹಳೆಯ ಕಸ್ಟಡಿ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೊಬ್ಬ ಪೊಲೀಸ್ ಅಧಿಕಾರಿ ಪ್ರವೀಣ್ ಸಿಂಗ್ ಅವರನ್ನೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿದೆ.
ಈ ಪ್ರಕರಣದಲ್ಲಿ 11 ಹೆಚ್ಚುವರಿ ಸಾಕ್ಷಿಗಳ ಪರೀಕ್ಷೆಯನ್ನು ಕೋರಿ ಭಟ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಕಳೆದ ವಾರ ನಿರಾಕರಿಸಿತು. ಈ 11 ಸಾಕ್ಷಿಗಳ ವಿಚಾರಣೆ ಪ್ರಕರಣದಲ್ಲಿ ನ್ಯಾಯಯುತ ನಿರ್ಧಾರಕ್ಕೆ ಬರಲು ನಿರ್ಣಾಯಕವಾಗಿದೆ ಎಂದು ವಜಾಗೊಂಡಿರುವ ಐಪಿಎಸ್ ಅಧಿಕಾರಿ ಭಟ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು.
ಗುಜರಾತ್ ಪೊಲೀಸರು ಅವರ ಮನವಿಯನ್ನು "ಪ್ರಕರಣದ ಫಲಿತಾಂಶವನ್ನು ವಿಳಂಬಗೊಳಿಸುವ ತಂತ್ರ" ಎಂದು ತೀವ್ರವಾಗಿ ವಿರೋಧಿಸಿದ್ದರು. ಘಟನೆಯ ಸಮಯದಲ್ಲಿ ಭಟ್ ಅವರನ್ನು ಗುಜರಾತ್‌ನ ಜಾಮ್‌ನಗರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಯಿತು. ಪ್ರಾಸಿಕ್ಯೂಷನ್ ಪ್ರಕಾರ, ಭಟ್ ಅಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದರು ಮತ್ತು ಬಂಧನಕ್ಕೊಳಗಾದವರಲ್ಲಿ ಒಬ್ಬರು ಬಿಡುಗಡೆಯಾದ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಅಧಿಕೃತ ವಾಹನಗಳ ಅನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರುಹಾಜರಾಗಿದ್ದಕ್ಕೆ ಮತ್ತು ಆಫೀಸ್ ವಾಹನವನ್ನು ದುರೋಪಯೋಗಪಡಿಸಿಕೊಂಡ ಆರೋಪದ ಮೇಲೆ ಅವರನ್ನು 2011 ರಲ್ಲಿ ಅಮಾನತುಗೊಳಿಸಲಾಯಿತು. ನಂತರ ಆಗಸ್ಟ್ 2015 ರಲ್ಲಿ ವಜಾ ಮಾಡಲಾಯಿತು.