ನವದೆಹಲಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 144 ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಗುಜರಾತ್ನ ಕೆವಾಡಿಯಾದಲ್ಲಿ ನೆಲೆಗೊಂಡಿರುವ 'ಸ್ಟ್ಯಾಚು ಆಫ್ ಯೂನಿಟಿ'ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ನೀಡಲಿದ್ದು, ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಿದ್ದಾರೆ.
ಪ್ರಧಾನಮಂತ್ರಿಯ ಭೇಟಿಗೆ ಸಂಬಂಧಿಸಿದಂತೆ ಏಕತಾ ಪ್ರತಿಮೆಯ ಸುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಪ್ರಧಾನಿ ಮೋದಿ ಅವರು ಗುರುವಾರ ಬೆಳಿಗ್ಗೆ ನರ್ಮದಾ ಜಿಲ್ಲೆಯ ಕೆವಾಡಿಯಾವನ್ನು ತಲುಪಲಿದ್ದು, ಅಲ್ಲಿ ಅವರು ಮೊದಲಿಗೆ ಸರ್ದಾರ್ ಸರೋವರ್ ಅಣೆಕಟ್ಟೆಯ ಬಳಿ ಇರುವ 182 ಮೀಟರ್ ಎತ್ತರದ 'ಸ್ಟ್ಯಾಚು ಆಫ್ ಯೂನಿಟಿ' ತಾಣಕ್ಕೆ ಭೇಟಿ ನೀಡಿ ಭಾರತದ ಐರನ್ ಮ್ಯಾನ್ ಗೆ ಗೌರವ ಅರ್ಪಿಸಲಿದ್ದಾರೆ.
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಬೆಳಿಗ್ಗೆ ಏಕತಾ ಪ್ರತಿಮೆಗೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಳಿಗ್ಗೆ 7:45ಕ್ಕೆ ಕೆವಾಡಿಯಾ ಕಾಲೋನಿ ತಲುಪಲಿರುವ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಂದು ವಿಶ್ವದ ಅತಿ ಎತ್ತರದ ಪ್ರತಿಮೆಯಾದ 'ಸ್ಟ್ಯಾಚು ಆಫ್ ಯೂನಿಟಿ'ಗೆ ಪುಷ್ಪ ನಮನ ಅರ್ಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಳಿಕ ಬೆಳಿಗ್ಗೆ 10 ಗಂಟೆಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ಬೆಳಿಗ್ಗೆ 11 ಗಂಟೆಗೆ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12.30 ರಿಂದ ಮಧ್ಯಾಹ್ನ 2.30 ರವರೆಗೆ ಪಿಎಂ ಮೋದಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ನಂತರ ಮೋದಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಪಿಎಂ ಮೋದಿ ಅವರು ಕೆವಾಡಿಯಾ ಕಾಲೋನಿಯಿಂದ ವಡೋದರಾಗೆ ತೆರಳಿದ್ದು ಅಲ್ಲಿಂದ ದೆಹಲಿಗೆ ಮರಳಲಿದ್ದಾರೆ.
ರಾಷ್ಟ್ರೀಯ ಏಕತಾ ದಿನ:
2014 ರಿಂದ, ಅಕ್ಟೋಬರ್ 31 ಅನ್ನು ಪ್ರತಿವರ್ಷ 'ರಾಷ್ಟ್ರೀಯ ಏಕತಾ ದಿನ' (National Unity day) ಎಂದು ಆಚರಿಸಲಾಗುತ್ತದೆ. ಈ ದಿನ ಪ್ರತಿ ವರ್ಗದ ಜನರು 'ರನ್ ಫಾರ್ ಯೂನಿಟಿ'(Run for Unity) ಯಲ್ಲಿ ಭಾಗವಹಿಸುತ್ತಾರೆ.