close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ ನಾಲ್ಕನೇ ಹಂತ; ಗೆಹ್ಲೋಟ್, ಕಮಲನಾಥ್ ಸೇರಿದಂತೆ ಘಟಾನುಘಟಿಗಳು ಕಣದಲ್ಲಿ!

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನದಲ್ಲಿ ಒಟ್ಟಾರೆ 12.79 ಕೋಟಿ ಮತದಾರರು 961 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿದ್ದಾರೆ.

Updated: Apr 29, 2019 , 08:02 AM IST
ಲೋಕಸಭಾ ಚುನಾವಣೆ ನಾಲ್ಕನೇ ಹಂತ; ಗೆಹ್ಲೋಟ್, ಕಮಲನಾಥ್ ಸೇರಿದಂತೆ ಘಟಾನುಘಟಿಗಳು ಕಣದಲ್ಲಿ!

ನವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಆರಂಭವಾಗಿದ್ದು, 9 ರಾಜ್ಯಗಳ 72 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಈ ಹಂತದ ಚುನಾವಣೆ ಪ್ರತಿಷ್ಠೆಯ ವಿಷಯ ಎಂದೇ ಪರಿಗಣಿಸಲಾಗಿದೆ. ಏಕೆಂದರೆ 2014 ರ ಲೋಕಸಭಾ ಚುನಾವಣೆಯಲ್ಲಿ 72 ಸ್ಥಾನಗಳಲ್ಲಿ 56 ಸ್ಥಾನಗಳನ್ನು ಬಿಜೆಪಿ ಮತ್ತದರ ಮಿತ್ರ ಪಕ್ಷಗಳು ಗಳಿಸಿದ್ದವು. ಉಳಿದಂತೆ 16 ಸ್ಥಾನಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಉಳಿದ ಸ್ಥಾನಗಳು ತೃಣಮೂಲ ಕಾಂಗ್ರೆಸ್ (6) ಮತ್ತು ಬಿಜೆಡಿ (6) ಗಳಂತಹ ವಿರೋಧ ಪಕ್ಷಗಳ ಪಾಲಾಗಿದ್ದವು.

ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಮಹಾರಾಷ್ಟ್ರದ 17, ರಾಜಸ್ಥಾನದ 13, ಉತ್ತರಪ್ರದೇಶದ 13, ಪಶ್ಚಿಮ ಬಂಗಾಳದ 8, ಮಧ್ಯ ಪ್ರದೇಶದ 6, ಒಡಿಶಾದ 6, ಬಿಹಾರದ 5, ಜಾರ್ಖಂಡ್ ನ 3 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಜಮ್ಮು- ಕಾಶ್ಮೀರದ ಅನಂತನಾಗ್ ಕ್ಷೇತ್ರದಲ್ಲಿ ಭದ್ರತಾ ದೃಷ್ಟಿಯಿಂದಾಗಿ ಮೂರೂ ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟಾರೆ 12.79 ಕೋಟಿ ಮತದಾರರು 961 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿದ್ದಾರೆ.

2014 ರಲ್ಲಿ 54 ಸ್ಥಾನಗಳಲ್ಲಿ 52 ಸ್ಥಾನಗಳನ್ನು ಬಿಜೆಪಿಗೆ ಜಯ 
2014ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದ 54 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 52 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್ ಈ ಬಾರಿ ಈ ಪ್ರದೇಶಗಳಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಲೋಕಸಭೆ ಚುನಾವಣೆಗೆ ಇದುವರೆಗೂ ನಡೆದಿರುವ ಮೂರು ಹಂತಗಳಲ್ಲಿ 302 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಉಳಿದ 168 ಸ್ಥಾನಗಳಿಗೆ ಮುಂದಿನ ಹಂತಗಳಲ್ಲಿ ಮತದಾನ ನಡೆಯಲಿದೆ.

ನಾಲ್ಕನೇ ಹಂತದ ಮತದಾನದಲ್ಲಿ ಕೇಂದ್ರ ಸಚಿವ, ಬಿಜೆಪಿ ನಾಯಕ ಗಿರಿರಾಜ ಸಿಂಗ್, ಸುಭಾಶ್ ಭಾಮರೆ, ಎಸ್.ಎಸ್. ಅಹಲುವಾಲಿಯಾ ಮತ್ತು ಬಾಬುಲ್ ಸುಪ್ರಿಯೋ ಮತ್ತು ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷೀದ್, ಅಧೀರ್ ರಂಜಾನ್ ಚೌಧರಿ ಸೇರಿದಂತೆ 961 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟಾರೆ 12.79 ಕೋಟಿ ಮತದಾರರು ತಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ಈ  ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ.

ಕನ್ಹಯ್ಯ ಕುಮಾರ್,  ಊರ್ಮಿಳಾ ಮಾತೋಂಡ್ಕರ್, ಡಿಂಪಲ್ ಯಾದವ್ ಅದೃಷ್ಟ ಪರೀಕ್ಷೆ
ಜೆಎನ್​ಯು ವಿದ್ಯಾರ್ಥಿ ಮುಖಂಡರಾಗಿದ್ದ ಕನ್ಹಯ್ಯ ಕುಮಾರ್ ಬಿಹಾರದ ಬೇಗುಸರಾಯ್ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಬೈಜಯಂತ್ ಪಾಂಡ, ಕಾಂಗ್ರೆಸ್ ನಿಂದ ಉರ್ಮಿಲಾ ಮಾತೋಂಡ್ಕರ್, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್, ತೃಣಮೂಲ ಕಾಂಗ್ರೆಸ್ನ ಶತಾಬ್ದಿ ರಾಯ್ ಮತ್ತು ಕಾಂಗ್ರೆಸ್'ನ ಮಿಲಿಂದ್ ದೇವಡಾ ಸೇರಿದಂತೆ ಹಲವು ಪ್ರಮುಖರು ನಾಲ್ಕನೇ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಹ್ನತದ ಚುನಾವಣೆಗೆ 1.40 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸಮಗ್ರ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ನಾಲ್ಕನೇ ಹಂತದ ಮತದಾನದೊಂದಿಗೆ ಮಹಾರಾಷ್ಟ್ರದ ಎಲ್ಲಾ ಕ್ಷೇತ್ರಗಳ ಮತದಾನ ಮುಕ್ತಾಯಗೊಳ್ಳಲಿದೆ. ಉತ್ತರ ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಬೆಂಬಲವನ್ನು ಮತ್ತೆ ಪಡೆಯಲು ಕಾಂಗ್ರೆಸ್ ಪ್ರಯತ್ನಿಸಿದೆ. ಥಾಣೆ ಜಿಲ್ಲೆ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಪುನಃ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಮೈತ್ರಿ ಪಕ್ಷ ಎನ್ಸಿಪಿ ಕಾಯುತ್ತಿದೆ. ನಾಲ್ಕನೆ ಹಂತದ ಚುನಾವಣೆಯಲ್ಲಿ ಮಹಾರಾಷ್ಟ್ರ 17 ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಜೋಧ್ಪುರದಿಂದ ವೈಭವ್ ಗೆಹ್ಲೋಟ್ ಕಣದಲ್ಲಿ!
ರಾಜಸ್ಥಾನದಲ್ಲಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್, ಜೈಪುರ ಮಾಜಿ ರಾಜ ಕುಟುಂಬದ ಸದಸ್ಯೆ ದಿಯಾ ಕುಮಾರಿ ಮತ್ತು ಇಬ್ಬರು ಕೇಂದ್ರ ಸಚಿವರು ಸೇರಿದಂತೆ 115 ಅಭ್ಯರ್ಥಿಗಳ ಭವಿಷ್ಯವು ಇವಿಎಂನಲ್ಲಿ ಭದ್ರವಾಗಿರಲಿದೆ. ಜೋಧ್ಪುರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ವೈಭವ್ ಗೆಹ್ಲೋಟ್ ಸ್ಪರ್ಧಿಸುತ್ತಿದ್ದಾರೆ. 2014 ರಲ್ಲಿ ರಾಜಸ್ಥಾನದ 25 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ ಈಗ ಕಾಂಗ್ರೆಸ್ ಗೆಲುವಿಗಾಗಿ ಪ್ರಯತ್ನಿಸುತ್ತಿದೆ.

ಉತ್ತರ ಪ್ರದೇಶದ 13 ಸ್ಥಾನಗಳಿಗೆ ಮತದಾನ
ನಾಲ್ಕನೇ ಹಂತದ ಮತದಾನದಲ್ಲಿ ಉತ್ತರಪ್ರದೇಶದ 13 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಬಿಜೆಪಿ ಮತ್ತು ಎಸ್ಪಿ-ಬಿಎಸ್ಪಿ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಕನ್ನೌಜ್ ಕ್ಷೇತ್ರವು ಎಸ್ಪಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಎಸ್ಪಿ ನಾಯಕ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಈ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿದ್ದಾರೆ. 2014 ರಲ್ಲಿ ಬಿಜೆಪಿ ಈ 13 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿದೆ.