ಸಸ್ಪೆನ್ಸ್ ಹೆಚ್ಚಿಸಿ, U-ಟರ್ನ್ ತೆಗೆದುಕೊಳ್ಳುತ್ತಿದೆಯೇ ಎನ್‌ಸಿಪಿ?

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಮೊದಲು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಸೋಮವಾರ ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾರೆ.

Last Updated : Nov 18, 2019, 04:09 PM IST
ಸಸ್ಪೆನ್ಸ್ ಹೆಚ್ಚಿಸಿ, U-ಟರ್ನ್ ತೆಗೆದುಕೊಳ್ಳುತ್ತಿದೆಯೇ ಎನ್‌ಸಿಪಿ? title=
File Image

ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಮೊದಲು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಸೋಮವಾರ ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಯು-ಟರ್ನ್ ತೆಗೆದುಕೊಂಡಿದ್ದು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿವಸೇನೆ ಒಟ್ಟಿಗೆ ಸ್ಪರ್ಧಿಸಿವೆ ಮತ್ತು ಅವರು ತಮ್ಮದೇ ಆದ ಮಾರ್ಗವನ್ನು ಆರಿಸಬೇಕಾಗುತ್ತದೆ ಎನ್ನುವ ಮೂಲಕ ಶಿವಸೇನೆಗೆ ಶಾಕ್ ನೀಡಿದ್ದಾರೆ. 

ಸಂಸತ್ತಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶರದ್ ಪವಾರ್, "ಬಿಜೆಪಿ-ಶಿವಸೇನೆ ಒಟ್ಟಾಗಿ ಚುನಾವಣೆಗಳಲ್ಲಿ ಹೋರಾಡಿದವು, ನಾವು ಮತ್ತು ಕಾಂಗ್ರೆಸ್ ಒಟ್ಟಾಗಿ ಹೋರಾಡಿದ್ದೇವೆ. ಅವರು ತಮ್ಮ ಮಾರ್ಗವನ್ನು ಆರಿಸಬೇಕಾಗುತ್ತದೆ ಮತ್ತು ನಾವು ನಮ್ಮ ರಾಜಕೀಯವನ್ನು ಮಾಡುತ್ತೇವೆ" ಎಂದು ಹೇಳಿದರು.

ಆದಾಗ್ಯೂ, ಸೋನಿಯಾ ಗಾಂಧಿಯನ್ನುಅವರ ನಿವಾಸದಲ್ಲಿ ಅವರನ್ನು ಭೇಟಿಯಾಗುವುದಾಗಿ ಹೇಳಿದರು. ಕಾಂಗ್ರೆಸ್ ಮೂಲಗಳ ಪ್ರಕಾರ, ಈ ಸಭೆಯಲ್ಲಿ ಮಹಾರಾಷ್ಟ್ರದ ಎರಡು ಸಮ್ಮಿಶ್ರ ಪಕ್ಷಗಳ ನಡುವಿನ ಮುಂದಿನ ಹೆಜ್ಜೆ ಮತ್ತು ಸಿದ್ಧಾಂತದ ಮಟ್ಟದಲ್ಲಿ ಎದುರಾಳಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಕಳೆದ ಮಂಗಳವಾರ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು.

ಚುನಾವಣಾ ಪೂರ್ವ ಸಮ್ಮಿಶ್ರ ಪಾಲುದಾರರಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಈಗಾಗಲೇ ಸರ್ಕಾರ ರಚಿಸಲು ಶಿವಸೇನೆಯೊಂದಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ (ಸಿಎಂಪಿ) ಕೆಲಸ ಮಾಡುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೈತ್ರಿಕೂಟಕ್ಕೆ ಹೌದು ಎಂದು ಹೇಳುವ ಮೊದಲು, ಶಿವಸೇನೆ ತನ್ನ ಕಠಿಣ ಹಿಂದೂತ್ವ ಸಿದ್ಧಾಂತವನ್ನು ತ್ಯಜಿಸಿ ಅನೇಕ ವಿಷಯಗಳ ಬಗ್ಗೆ ಜಾತ್ಯತೀತ ನಿಲುವನ್ನು ಅಳವಡಿಸಿಕೊಳ್ಳಬೇಕೆಂದು ಪಕ್ಷ ಬಯಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಕೂಡ ಸರ್ಕಾರಕ್ಕೆ ಸೇರಬೇಕೆಂದು ಎನ್‌ಸಿಪಿ ಬಯಸಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಲು  ಶರದ್ ಪವಾರ್ ಇಂದು ದೆಹಲಿ ತಲುಪಿದ್ದಾರೆ ಎಂಬುದು ಗಮನಾರ್ಹವಾಗಿದೆ. ಇಂದು ಸಂಜೆ 5 ಗಂಟೆಗೆ ನಡೆಯಲಿರುವ ಈ ಸಭೆಯ ನಂತರ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಲಿರುವ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದು ನಂಬಲಾಗಿದೆ. ಸೋನಿಯಾ ಅವರನ್ನು ಭೇಟಿಯಾಗುವ ಮೊದಲು ಶರದ್ ಪವಾರ್ ಅವರು ನವದೆಹಲಿಯಲ್ಲಿ ಸೋನಿಯಾ ಗಾಂಧಿ ನಾಮನಿರ್ದೇಶನ ಮಾಡಿದ ಕಾಂಗ್ರೆಸ್ ಪ್ರತಿನಿಧಿಗಳನ್ನು ಭೇಟಿಯಾಗಲಿದ್ದಾರೆ. ಸೋನಿಯಾ ಗಾಂಧಿ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಮೂರು ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಮಲ್ಲಿಕರ್ಜುನ್ ಖರ್ಗೆ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಶರದ್ ಪವಾರ್ ಅವರೊಂದಿಗೆ ಸಭೆ ನಡೆಸಿ ಅಧಿಕಾರದ ಒಪ್ಪಂದದ ಕುರಿತು ಮೂರು ಪಕ್ಷಗಳ ನಡುವಿನ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

'ಮಹಾ' ಅಧಿಕಾರ ಹಂಚಿಕೆ ಒಪ್ಪಂದವು ಅಂತಿಮ ಹಂತದಲ್ಲಿದೆ ಎಂದು ಮೂಲವೊಂದು ತಿಳಿಸಿದೆ. ರಾಜ್ಯದ ಹಿರಿಯ ಮುಖಂಡರು, "ನಾವು ಅವಸರದಲ್ಲಿಲ್ಲ. ಐಡಿಯಾಲಜಿ ಒಂದು ದೊಡ್ಡ ವಿಷಯವಾಗಿದೆ. ಇದನ್ನು ಪರಿಹರಿಸಲಾಗುತ್ತಿದೆ. ಈ ರೀತಿಯ ಮೈತ್ರಿ ಸಮಯ ತೆಗೆದುಕೊಳ್ಳುತ್ತದೆ" ಎಂದು ಹೇಳಲಾಗಿದೆ.
 

Trending News