ಶ್ರೀನಗರ: ಜೂನ್ 12 ರಂದು ಅನಂತ್‌ನಾಗ್ ನಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯಲ್ಲಿ ಭಯೋತ್ಪಾದಕರು ಚೀನಾದಲ್ಲಿ ತಯಾರಾದ ಉಕ್ಕಿನ ಬುಲೆಟ್ ಗಳನ್ನು ಬಳಸಿದ್ದಾರೆ ಎಂಬ ಆಘಾತಕಾರಿ ಅಂಶವೊಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಂದು ನಡೆದ ದಾಳಿಯಲ್ಲಿ ಭದ್ರತಾ ಪಡೆ ಯೋಧರು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಾದರೂ, ಅದನ್ನೂ ಭೇದಿಸಿ ಅವರ ದೇಹಕ್ಕೆ ತಾಗಿದ್ದವು.
ಅಂದು ನಡೆದ ದಾಳಿಯಲ್ಲಿ ಓರ್ವ ಉಗ್ರ ಹತ್ಯೆಯಾಗಿದ್ದು, ಎಕೆ 47 ಬಂದುಕನ್ನು ಆತನಿಂದ ವಶಪಡಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಟೀಲ್ ಬುಲೆಟ್ ಗಳನ್ನೂ ವಶಕ್ಕೆ ಪಡೆಯಲಾಗಿತ್ತು. ಈ ಘಟನೆಯಲ್ಲಿ 9 ಯೋಧರು ಗಾಯಗೊಂಡಿದ್ದರಲ್ಲದೆ, ಇಬ್ಬರು ಮೃತಪಟ್ಟಿದ್ದರು.
ಭದ್ರತೆ ಮತ್ತು ರಕ್ಷಣಾ ಸಿಬ್ಬಂದಿಯನ್ನು ಗುರಿಯಾಗಿಸಲು ಪಾಕಿಸ್ತಾನದ ಐಎಸ್‌ಐ ಮತ್ತು ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕರಿಗೆ ಉಕ್ಕಿನ ಗುಂಡುಗಳನ್ನು ಒದಗಿಸಿದ್ದಾರೆ ಎಂದು ದಾಳಿಯ ತನಿಖೆಯಿಂದ ತಿಳಿದುಬಂದಿದೆ. ಬುಲೆಟ್ ಪ್ರೂಫ್ ಜಾಕೆಟ್ ಗಳನ್ನೂ ಭೇದಿಸಲೆಂದೇ ಈ ಸ್ಟೀಲ್ ಬುಲೆಟ್ ಗಳನ್ನು ಬಳಸಲಾಗುತ್ತದೆ.
ಪುಲ್ವಾಮಾ ಮತ್ತು ತ್ರಾಲ್ ನಲ್ಲಿ ನಡೆದ ದಾಳಿಯಲ್ಲಿಯೂ ಭಯೋತ್ಪಾದಕರು ಉಕ್ಕಿನ ಗುಂಡುಗಳನ್ನು ಬಳಸಿದ್ದಾರೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಪ್ರಮುಖ ಭಾರತ ವಿರೋಧಿ ಕಾರ್ಯಾಚರಣೆಗಳಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆ ಉಗ್ರರು ಇದೇ ಗುಂಡುಗಳನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 27, 2017 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ ಮೊದಲ ಬಾರಿಗೆ ಈ ಸ್ಟೀಲ್ ಬುಲೆಟ್ ಬಳಸಲಾಗಿತ್ತು.