ಒಂದು ವೇಳೆ ನಿಮ್ಮ ಮೊಬೈಲ್ ಫೋನ್ ಗೆ ನೀವು ಅಳವಡಿಸುವ ನಿಮ್ಮ SIM ಕಾರ್ಡ್, ಮೈಕ್ರೋ ಎಸ್.ಡಿ ಕಾರ್ಡ್ ಕೂಡ ಆಗಿದ್ದರೆ ಹೇಗಿರಲಿದೆ ಎಂದು ಒಮ್ಮೆ ಊಹಿಸಿ ನೋಡಿ. ಹೌದು, ಮುಂಬರುವ ದಿನಗಳಲ್ಲಿ ಇದು ನಿಜ ಎಂದು ಸಾಬೀತಾಗಲಿದೆ. ಚೀನಾದ ಖ್ಯಾತ ಮೊಬೈಲ್ ತಯಾರಕ ಕಂಪನಿ ಶಾವೊಮಿ ಇಂತಹುದೇ ಒಂದು SIM ಕಾರ್ಡ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ತೊಡಗಿದ್ದು, ಈ ಕಾರ್ಡ್ ಅನ್ನು ನೀವು ಏಕಕಾಲಕ್ಕೆ SIM ಕಾರ್ಡ್ ಹಾಗೂ ಮೈಕ್ರೋ ಎಸ್.ಡಿ ಕಾರ್ಡ್ ರೂಪದಲ್ಲಿ ಬಳಸಬಹುದು. ಇದರಿಂದ ನಿಮ್ಮ ಸ್ಮಾರ್ಟ್ ಫೋನ್ ನ ಶೇಖರಣಾ ಸಾಮರ್ಥ್ಯ ನಿಶ್ಚಿತವಾಗಿ ಹೆಚ್ಚಾಗಲಿದೆ. ಇತ್ತೀಚಿಗೆ ಹಲವು ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಲ್ಲಿ ಮೈಕ್ರೋ SD ಕಾರ್ಡ್ ಸ್ಲಾಟ್ ಕೂಡ ನೀಡಲಾಗುತ್ತಿಲ್ಲ. ಉದಾಹರಣೆಗಾಗಿ iPhone ಹಾಗೂ Google Pixel 4 ಗಳಲ್ಲಿ ಮೈಕ್ರೋ SD ಕಾರ್ಡ್ ಸ್ಲಾಟ್ ಇಲ್ಲದಿರುವುದನ್ನು ನೀವು ಗಮನಿಸಬಹುದು.
ಇತ್ತೀಚೆಗಷ್ಟೇ ಶಾವೊಮಿ ಕಂಪನಿ ಈ ಸ್ಪೆಷಲ್ ಕಾರ್ಡ್ ಗಾಗಿ ಹಕ್ಕುಸ್ವಾಮ್ಯ ಕೂಡ ಪಡೆದಿದೆ. ಭವಿಷ್ಯದಲ್ಲಿ ಒಂದು ವೇಳೆ ನಿಮ್ಮ ಫೋನ್ ನಲ್ಲಿ ಮೈಕ್ರೋ SD ಕಾರ್ಡ್ ಇಲ್ಲದೆ ಹೋದಲ್ಲಿ, ನಿಮ್ಮ ಸಿಮ್ ಕಾರ್ಡನ್ನೇ ನೀವು ಮೈಕ್ರೋ SD ಕಾರ್ಡ್ ರೀತಿಯಲ್ಲಿ ಉಪಯೋಗಿಸಬಹುದು. ಗಿಜ್ಮೋಚೈನಾನಲ್ಲಿ ಪ್ರಕಟವಾಗಿರುವ ಒಂದು ವರದಿಯ ಪ್ರಕಾರ, ಸೋರಿಕೆಯಾಗಿರುವ ಫೋಟೋಗಳನ್ನು ಆಧರಿಸಿ, ಶಾವೊಮಿಯ ಈ ಡ್ಯುಯೆಲ್ ಸಿಮ್ ಕಾರ್ಡ್ ನ ಒಂದು ಬದಿಗೆ ಸಿಮ್ ಕಾರ್ಡ್ ತಂತ್ರಜ್ಞಾನ ಇರಲಿದ್ದರೆ ಇನ್ನೊಂದು ಬದಿಗೆ ಮೈಕ್ರೋ SD ಕಾರ್ಡ್ ತಂತ್ರಜ್ಞಾನ ಇರಲಿದೆ.
ಇದರಿಂದ ನಿಮ್ಮ ಫೋನ್ ನಲ್ಲಿ ಈ ಮೊದಲು ಇರುತ್ತಿದ್ದ ಸ್ಟೋರೇಜ್ ಟೆಕ್ನಾಲಾಜಿ ಇರುವುದಿಲ್ಲ. ಆದ್ರೆ, ಈ ವಿಶೇಷ SIM ಕಾರ್ಡ್ ಬಳಕೆ ಕೇವಲ ಶಾವೊಮಿ ಹಾಗೂ ರೆಡ್ ಮಿ ಮೊಬೈಲ್ ಗಳಲ್ಲಿ ಮಾತ್ರವೇ ಸೀಮಿತವಾಗುವ ಸಾಧ್ಯತೆ ಹೆಚ್ಚಾಗಿವೆ.
ಎಲ್ಲವೂ ಹಕ್ಕುಸ್ವಾಮ್ಯದ ಪ್ರಕಾರ ನಡೆದರೆ, ಮುಂಬರುವ ದಿನಗಳಲ್ಲಿ ಈ ಸಿಮ್ ಕಾರ್ಡ್ ನಿಜವಾಗಿಯೂ ಕೂಡ ಬಳಕೆಗೆ ಬರಲಿದೆ. ಅಷ್ಟೇ ಅಲ್ಲ ಮುಂಬರುವ ದಿನಗಳಲ್ಲಿ ಮೊಬೈಲ್ ಕಂಪನಿಗಳು ಯಾವ ರೀತಿಯ ಟ್ರೆಂಡ್ ಗಳನ್ನು ತಮ್ಮದಾಗಿಸಿಕೊಳ್ಳುತ್ತವೆ ಎಂಬುದೂ ಕೂಡ ಕಾದುನೋಡಬೇಕು. ಏಕೆಂದರೆ ಈಗಾಗಲೇ ವಿಶ್ವಾದ್ಯಂತ ಇರುವ ಮೊಬೈಲ್ ತಯಾರಕ ಕಂಪನಿಗಳು ಇ-ಸಿಮ್ ಕಾರ್ಡ್ ಬಳಕೆಯ ಕುರಿತು ಸದ್ಯ ಆಲೋಚಿಸುತ್ತಿರುವುದು ಇಲ್ಲಿ ಗಮನಾರ್ಹವಾಗಿದೆ.