ನವದೆಹಲಿ: ಭದ್ರತಾ ರಕ್ಷಣೆಯ ಕುರಿತು ಕೇಂದ್ರ ಸರ್ಕಾರ ಸೋಮವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಹೊಸ ಮಾರ್ಗಸೂಚಿಗಳ ಪ್ರಕಾರ ಗಾಂಧಿ ಕುಟುಂಬಕ್ಕೆ ಇನ್ನು ಮುಂದೆ ವಿದೇಶಿ ಪ್ರವಾಸದ ವೇಳೆಯೂ ಕೂಡ ಎಸ್ಪಿಜಿ ರಕ್ಷಣೆ ಒದಗಿಸುವುದು ಕಡ್ಡಾಯ ಎನ್ನಲಾಗಿದೆ.
ಕ್ಯಾಬಿನೆಟ್ ಸೆಕ್ರೆಟರಿಯಟ್ ಹೊರಡಿಸಿದ ಹೊಸ ಮಾರ್ಗಸೂಚಿಯನ್ವಯ ರಕ್ಷಕರು ತಮ್ಮ ಪ್ರವಾಸ ಮತ್ತು ಸಭೆಗಳ ಪ್ರತಿ ನಿಮಿಷದ ವಿವರಗಳನ್ನು ವಿದೇಶಿ ಭೇಟಿಯ ಸಮಯದಲ್ಲಿ ಸಲ್ಲಿಸುವುದು ಕಡ್ಡಾಯಗೊಳಿಸುತ್ತದೆ. ಈಗ ರಕ್ಷಕರಿಗೆ ತಮ್ಮ ಹಿಂದಿನ ಕೆಲವು ಪ್ರವಾಸಗಳ ಮಾಹಿತಿಯನ್ನು ಸಹ ಒದಗಿಸುವಂತೆ ಕೇಳಿಕೊಳ್ಳಲಾಗಿದೆ.
ಪ್ರಸ್ತುತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಎಸ್‌ಪಿಜಿ ರಕ್ಷಣೆ ನೀಡಲಾಗಿದೆ. ಒಂದು ವೇಳೆ ಈ ನೂತನ ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ ಅವರ ವಿದೇಶಿ ಭೇಟಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ನರೇಂದ್ರ ಮೋದಿ ಸರ್ಕಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಿದ್ದ ಎಸ್‌ಪಿಜಿ ರಕ್ಷಣೆಯನ್ನು ಹಿಂತೆಗೆದುಕೊಂಡು ಅವರಿಗೆ ಜೆಡ್ + ಭದ್ರತೆ ನೀಡಲಾಗಿತ್ತು.
ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿನ ವಿಧಾನಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿಯವರ ವಿದೇಶ ಪ್ರವಾಸದ ಬಗ್ಗೆ ಪ್ರಶ್ನೆಗಳು ಎದ್ದಿರುವ ಸಮಯದಲ್ಲಿ ಎಸ್‌ಪಿಜಿ ಭದ್ರತಾ ವ್ಯಾಪ್ತಿಯಲ್ಲಿ ಬದಲಾವಣೆ ಕಂಡು ಬಂದಿದೆ.