ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ 25 ಲಕ್ಷ ರೂ. ಮಧ್ಯಂತರ ಪರಿಹಾರಕ್ಕೆ ಸುಪ್ರೀಂ ಸೂಚನೆ; ಎಲ್ಲಾ 5 ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಿ ಆದೇಶ

ಮುಖ್ಯ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು 45 ದಿನಗಳಲ್ಲಿ ಪೂರ್ಣಗೊಳಿಸುವಂತೆ ಮತ್ತು ಅಪಘಾತ ಪ್ರಕರಣದ ತನಿಖೆಯನ್ನು ಏಳು ದಿನಗಳಲ್ಲಿ ಮುಗಿಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಸೂಚಿಸಿದೆ. 

Updated: Aug 1, 2019 , 04:00 PM IST
ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ 25 ಲಕ್ಷ ರೂ. ಮಧ್ಯಂತರ ಪರಿಹಾರಕ್ಕೆ ಸುಪ್ರೀಂ ಸೂಚನೆ; ಎಲ್ಲಾ 5 ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಿ ಆದೇಶ

ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣ ಮತ್ತು ಅಪಘಾತದ ಎಲ್ಲಾ ಐದು ಪ್ರಕರಣಗಳನ್ನು ದೆಹಲಿ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಗುರುವಾರ ವರ್ಗಾಯಿಸಿದೆ. 

ಅಲ್ಲದೆ, ಮುಖ್ಯ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು 45 ದಿನಗಳಲ್ಲಿ ಪೂರ್ಣಗೊಳಿಸುವಂತೆ ಮತ್ತು ಅಪಘಾತ ಪ್ರಕರಣದ ತನಿಖೆಯನ್ನು ಏಳು ದಿನಗಳಲ್ಲಿ ಮುಗಿಸುವಂತೆ ಸಿಬಿಐಗೆ ಸೂಚಿಸಿದೆ. ಜೊತೆಗೆ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಉನ್ನತ ನ್ಯಾಯಾಲಯ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಆದೇಶಿಸಿದೆ.

ದೆಹಲಿಯಲ್ಲಿ ನಿಯೋಜಿತ ನ್ಯಾಯಾಧೀಶರು ದಿನನಿತ್ಯದ ವಿಚಾರಣೆಯನ್ನು ಆರಂಭಿಸಿ, 45 ದಿನಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲಿದ್ದಾರೆ. ಅಂತೆಯೇ ಇನ್ನೆರಡು ವಾರಗಳಲ್ಲಿ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಸಲು ತನಿಖಾ ಸಂಸ್ಥೆಗೆ ಸೂಚಿಸಲಾಗಿದೆ.

"ನಾವು ಸಂತ್ರಸ್ತೆ, ಆಕೆಯ ವಕೀಲರು, ತಾಯಿ, ನಾಲ್ವರು ಒಡಹುಟ್ಟಿದವರು, ಅವರ ಚಿಕ್ಕಪ್ಪ ಮತ್ತು ಉನ್ನಾವೊದ ಹಳ್ಳಿಯಲ್ಲಿರುವ ಕುಟುಂಬ ಸದಸ್ಯರಿಗೆ ನಾವು ಈ ಕೂಡಲೇ ಭದ್ರತೆ ಮತ್ತು ರಕ್ಷಣೆಯನ್ನು ನೀಡಲು ನಿರ್ದೇಶಿಸುತ್ತೇವೆ" ಎಂದು ಉನ್ನತ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.

ಏತನ್ಮಧ್ಯೆ, ಉನ್ನಾವೋ ಪ್ರಕರಣದ ಬಗ್ಗೆ ಮತ್ತು ಸಂತ್ರಸ್ತೆ ಕಾರು ಅಪಘಾತಂದ ಬಳಿಕ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರಕರಣದ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. 

ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ವಕೀಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆಯಾದರೂ, ಇನ್ನೂ ಲೈಫ್ ಸಪೋರ್ಟ್ ನಲ್ಲಿದ್ದಾರೆ ಎಂದು ಉತ್ತರ ಪ್ರದೇಶದ ಲಕ್ನೋದಲ್ಲಿರುವ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆ ಗುರುವಾರ ಮಾಹಿತಿ ನೀಡಿದೆ.

ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ವಕೀಲರನ್ನು ಆಸ್ಪತ್ರೆಯಿಂದ ದೆಹಲಿಗೆ ವಿಮಾನದಲ್ಲಿ ಕರೆದೊಯ್ಯಬಹುದು ಎಂದು ಆಸ್ಪತ್ರೆಯು ಉನ್ನತ ನ್ಯಾಯಾಲಯಕ್ಕೆ ತಿಳಿಸಿದೆ.