ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆ ಘೋಷಿಸಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಟ್ವಿಟರ್ನಲ್ಲಿ ಈ ಘೋಷಣೆ ಮಾಡಿದ್ದಾರೆ.
"ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕಿ ಗೌರವಾನ್ವಿತ ಸುಷ್ಮಾ ಸ್ವರಾಜ್ ಜಿ ಅವರ ಸ್ಮರಣಾರ್ಥ ಗೌರವದ ಸಂಕೇತವಾಗಿ ದೆಹಲಿ ಸರ್ಕಾರ ಎರಡು ದಿನಗಳ ರಾಜ್ಯ ಶೋಕಾಚರಣೆಯನ್ನು ಆಚರಿಸಲಿದೆ" ಎಂದು ಸಿಸೋಡಿಯಾ ಬುಧವಾರ ಬೆಳಿಗ್ಗೆ ಟ್ವೀಟ್ ನಲ್ಲಿ ಹೇಳಿದ್ದಾರೆ.
ಸಿಸೋಡಿಯಾ ಅವರ ಟ್ವೀಟ್ ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಿಟ್ವೀಟ್ ಮಾಡಿದ್ದು, “ಎರಡು ದಿನಗಳ ಕಾಲ ರಾಜ್ಯದ ಶೋಕಾಚರಣೆಯನ್ನು ಆಚರಿಸುವ ಮೂಲಕ ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಜಿ ಅವರಿಗೆ ದೆಹಲಿ ಗೌರವ ಸಲ್ಲಿಸಲಿದೆ” ಎಂದು ಬರೆದಿದ್ದಾರೆ.
ದೆಹಲಿ ಮಾತ್ರವಲ್ಲದೆ ಹರಿಯಾಣ ಸರ್ಕಾರವು ಕೂಡ ಎರಡು ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ನಾಯಕರು ಅಗಲಿದ ನಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಮಿತ್ ಶಾ, ಸುಷ್ಮಾ ಸ್ವರಾಜ್ ಅವರನ್ನು "ಹೊಳೆಯುವ ನಕ್ಷತ್ರ" ಎಂದು ಬಣ್ಣಿಸಿದರು.