ನವದೆಹಲಿ: ಭಾರತೀಯ ಮಿಲಿಟರಿಯ ಗುಪ್ತಚರ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಶಂಕಿತ ಐಎಸ್ಐ ಏಜೆಂಟ್ ನನ್ನು ಪಂಜಾಬ್ ಪೊಲೀಸರು ಶುಕ್ರವಾರ ಜಲಂಧರ್ ನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ರಾಮ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಫಜಲಿಕಾ ನಿವಾಸಿ ಎನ್ನಲಾಗಿದೆ. ಬಂಧಿತ ಆರೋಪಿಯ ಬಳಿ ಇದ್ದ ಎರಡು ಮೊಬೈಲ್ ಫೋನ್ ಮತ್ತು ನಾಲ್ಕು ಸಿಮ್ ಕಾರ್ಡ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಹಣಕ್ಕಾಗಿ ಪಾಕಿಸ್ತಾನದ ಐಎಸ್ಐ ಏಜೆಂಟರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಭಾರತ-ಪಾಕ್ ಗಡಿಯುದ್ದಕ್ಕೂ ಭಾರತೀಯ ಸೇನೆಯ ಇರುವಿಕೆ ಬಗ್ಗೆ ಮಾಹಿತಿ ನೀಡುವ ಕೆಲಸ ವಹಿಸಿಕೊಂಡಿದ್ದ ಎನ್ನಲಾಗಿದೆ. ಅಲ್ಲದೆ, ಆ ಪ್ರದೇಶದಲ್ಲಿ ಭಾರತೀಯ ಸೇನೆಯ ಚಲನವಲನಗಳ ಬಗ್ಗೆಯೂ ಮಾಹಿತಿ ತಲುಪಿಸುತ್ತಿದ್ದ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರ ಮಿಲಿಟರಿ ಗುಪ್ತಚರ ಘಟಕ ಆತನ ಚಟುವಟಿಕೆಗಳ ಬಗ್ಗೆ ನೀಡಿದ ಖಚಿತ ಮಾಹಿತಿಯ ಮೇರೆಗೆ ರಾಜ್ಯ ವಿಶೇಷ ಕಾರ್ಯಾಚರಣೆ ಘಟಕ ಆರೋಪಿಯನ್ನು ಬಂಧಿಸಿದೆ. ಆತನ ಆರೋಗ್ಯ ತಪಾಸಣೆ ಬಳಿಕ ಹೆಚ್ಚಿನ ವಿಚಾರಣೆಗಾಗಿ ಚಂಡೀಗಢಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.