ಅಮರಾವತಿ: ಮೇ 19ರಂದು 2019ರ ಲೋಕಸಭಾ ಚುನಾವಣೆಗೆ ಕೊನೆಯ ಹಂತದ ಮತದಾನ ಪೂರ್ಣಗೊಂಡ ಬಳಿಕ ಬಹುತೇಕ ಮಾಧ್ಯಮಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಬಹುಮತ ಸಾಧಿಸಲಿದ್ದು, ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, 1999 ರಿಂದ ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳು ತಪ್ಪಾಗಿವೆ. ಚುನಾವಣೋತ್ತರ ಸಮೀಕ್ಷೆಗಳು ಚುನಾವಣೆಯ ನಿಜವಾದ ಫಲಿತಾಂಶಗಳಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಗುಂಟೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೆಂಕಯ್ಯ ನಾಯ್ಡು, ಪ್ರಸ್ತುತ ಸಾರ್ವತ್ರಿಕ ಚುನಾವಣೆಯನ್ನು ಉಲ್ಲೇಖಿಸಿ, ಪ್ರತಿ ಪಕ್ಷಕ್ಕೂ ಅವರ ವಿಜಯದ ಬಗ್ಗೆ ಭರವಸೆ ಇರುತ್ತದೆ. ಆತ್ಮವಿಶ್ವಾಸವಿರುತ್ತದೆ. ಆದ್ದರಿಂದ ಮೇ 23ರವರೆಗೂ ನಿಜವಾದ ಫಲಿತಾಂಶಕ್ಕಾಗಿ ಕಾಯಬೇಕು ಎಂದು ಹೇಳಿದರು.
ರಾಷ್ಟ್ರ ಮತ್ತು ರಾಜ್ಯವು ಒಬ್ಬ ನುರಿತ ನಾಯಕ ಮತ್ತು ಸ್ಥಿರ ಸರ್ಕಾರವನ್ನು ಹೊಂದಿರಬೇಕು. ಅಷ್ಟೇ ಅಲ್ಲ, ಸಮಾಜದ ಬದಲಾವಣೆಯು ರಾಜಕೀಯ ಪಕ್ಷಗಳಲ್ಲಿ ಬದಲಾವಣೆಯನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.