ಕೈಫಿ ಅಜ್ಮಿ ಅವರು ಬಾಲಿವುಡ್ ಸಿನಿಮಾದಲ್ಲಿ ಉರ್ದು ಸಾಹಿತ್ಯವನ್ನು ತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವರು. ಇಂದು ಅವರ 102 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಮೂಲತಃ ಅಜ್ಮಿ ಅವರು ಉತ್ತರ ಪ್ರದೇಶದ ಅಜಮ್‌ಗಡ್ ಜಿಲ್ಲೆಯ ಮಿಜ್ವಾನ್ ಗ್ರಾಮದಲ್ಲಿ ಶಿಯಾ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರ ಕುಟುಂಬವೂ ಮೊದಲಿನಿಂದಲೂ ಕಲಾವಿದರ ಕುಟುಂಬವಾಗಿತ್ತು. ಅವರಿಗೆ ಮೂವರು ಸಹೋದರರಿದ್ದರು,ಅವರು ಕೂಡ ಶಾಯರ್ ಗಳಾಗಿದ್ದರು. ಅಜ್ಮಿ ಶೌಕತ್ ಅಜ್ಮಿಯನ್ನು ಮದುವೆಯಾಗಿದ್ದರು. ಅವರಿಗೆ ಮಗಳು ಶಬಾನಾ ಅಜ್ಮಿ (Shabana Azmi) ಮಗ ಬಾಬಾ ಅಜ್ಮಿ, ಸೊಸೆ ತನ್ವಿ ಅಜ್ಮಿ ಇದ್ದಾರೆ.
ಇದನ್ನೂ ಓದಿ: ಸರ್ಕಾರದ ನ್ಯೂನ್ಯತೆ ಎತ್ತಿ ತೋರಿಸಿದವರಿಗೆ ದೇಶದ್ರೋಹಿ ಎನ್ನುವ ಸ್ಥಿತಿ ಇದೆ-ಶಬನಾ ಅಜ್ಮಿ
ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು:
ಅಜ್ಮಿ ಅವರು ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಮೊದಲ ಗಜಲ್ ಅನ್ನು ಬಹ್ರೈಚ್ ಇತ್ನಾ ತೋ ಜಿಂದಗಿ ಮೇ ಕಿಸಿ ಕಿ ಖಲಾಲ್ ಪಡೆ ರಚಿಸಿದರು.ತದನಂತರ ಅವರನ್ನು ಮುಷೈರಾಕ್ಕೆ ಆಹ್ವಾನಿಸಲಾಯಿತು.ಅಲ್ಲಿ ಅವರು ಗಜಲ್ ಅನ್ನು ಪಠಿಸಿದರು, ಆದರೆ ಬಹುತೇಕ ಜನರು ತಮ್ಮ ಹಿರಿಯ ಸಹೋದರನ ಆ ಗಜಲ್ ಅನ್ನು ಪಠಿಸಿದ್ದಾರೆಂದು ಭಾವಿಸಿದ್ದರು. ಆದರೆ ಅವರ ಹಿರಿಯ ಸಹೋದರ ಅದನ್ನು ನಿರಾಕರಿಸಿದಾಗ, ಅವರ ತಂದೆ ಮತ್ತು ಗುಮಾಸ್ತರು ಅವರ ಕಾವ್ಯಾತ್ಮಕ ಪ್ರತಿಭೆಯನ್ನು ಪರೀಕ್ಷಿಸಲು ನಿರ್ಧರಿಸಿದರು. ಅವರಿಗೆ ಕೆಲವು ಸಾಲುಗಳನ್ನು ನೀಡಿದರು ಮತ್ತು ಅದೇ ಮೀಟರ್ ಮತ್ತು ಪ್ರಾಸದಲ್ಲಿ ಗಜಲ್ ಬರೆಯಲು ಕೇಳಿದರು.ಈ ಸವಾಲನ್ನು ಅಜ್ಮಿ ಸ್ವೀಕರಿಸಿ ಗಜಲ್ ನ್ನು ಪೂರ್ಣಗೊಳಿಸಿದರು.ಈ ನಿರ್ದಿಷ್ಟ ಗಜಲ್ ಅಖಂಡ ಭಾರತದಲ್ಲಿ ಅಜ್ಮಿ ಅವರಿಗೆ ಹೆಸರನ್ನು ತಂದುಕೊಟ್ಟಿತು. ಇದಾದ ನಂತರ ಈ ಗಜಲ್ ನ್ನು ಗಾಯಕಿ ಬೇಗಂ ಅಖ್ತರ್ ಹಾಡಿದ್ದರಿಂದಾಗಿ ಅದು ಸಾಕಷ್ಟು ಜನಮನ್ನನೆಯನ್ನು ಗಳಿಸಿತು.ಕೈಫಿ ಅಜ್ಮಿ ಅವರು ಪಿರ್ಜಾಡಾ ಕಾಸಿಮ್, ಜಾನ್ ಎಲಿಯಾ ಅವರ ಜೊತೆಗೆ ಇಪ್ಪತ್ತನೇ ಶತಮಾನದ ಅನೇಕ ಸ್ಮರಣೀಯ ಮುಷೈರಾ ಕೂಟಗಳಲ್ಲಿ ಭಾಗವಹಿಸಿದರು.
As a tribute to #Kaifi Azmi On 14th Jan at 10 pm presented by Rekhta. Runs for an hour. https://t.co/vOp31Vesur is the link . 13 original compositions by #Shankar Mahadevan pic.twitter.com/vW247Ju3nf
— Azmi Shabana (@AzmiShabana) January 12, 2021
ಕಮ್ಯೂನಿಸ್ಟ್ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದು:
ಅಜ್ಮಿ ಅವರು 1942 ರಲ್ಲಿ ಕ್ವಿಟ್ ಇಂಡಿಯಾ ಆಂದೋಲನಗಳಲ್ಲಿ ಭಾಗವಹಿಸುವುದಕ್ಕಾಗಿ ಪರ್ಷಿಯನ್ ಮತ್ತು ಉರ್ದು ಅಧ್ಯಯನವನ್ನು ತ್ಯಜಿಸಿದರು ಮತ್ತು ಸ್ವಲ್ಪ ಸಮಯದ ನಂತರ ಅವರು 1943 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡಿದರು.
ಈ ಅವಧಿಯಲ್ಲಿ ಲಕ್ನೋದ ಪ್ರಮುಖ ಪ್ರಗತಿಪರ ಬರಹಗಾರರು ಅವರ ಪ್ರತಿಭೆಯನ್ನು ಗುರುತಿಸಿದರು ಅಷ್ಟೇ ಅಲ್ಲದೇ ಅವರ ನಾಯಕತ್ವದ ಗುಣಗಳಿಂದ ಅವರು ತುಂಬಾ ಪ್ರಭಾವಿತರಾದರು. ಅವರು ಅಜ್ಮಿ ಅವರಲ್ಲಿನ ಉದಯೋನ್ಮುಖ ಕವಿಯನ್ನು ಸಹ ಕಂಡರು ಮತ್ತು ಅವರಿಗೆ ಎಲ್ಲ ಪ್ರೋತ್ಸಾಹವನ್ನು ನೀಡಿದರು.ಇದರಿಂದಾಗಿ ಅಜ್ಮಿ ಅವರು ಕವಿಯಾಗಿ ಸಾಕಷ್ಟು ಜನ ಮನ್ನಣೆಯನ್ನು ಗಳಿಸಿದರು.ಮುಂದೆ ಅವರು ಪ್ರಗತಿಪರ ಬರಹಗಾರರ ಚಳವಳಿಯ ಸದಸ್ಯರಾದರು.ಅಷ್ಟೇ ಅಲ್ಲದೇ 24 ನೇ ವಯಸ್ಸಿನಲ್ಲಿ ಕಾನ್ಪುರದ ಜವಳಿ ಗಿರಣಿ ಪ್ರದೇಶಗಳಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಚಟುವಟಿಕೆಗಳನ್ನು ಪ್ರಾರಂಭಿಸಿದರು.ಅವರು ಜಮೀನ್ದಾರನ ಮಗನಾಗಿದ್ದರೂ ತಮ್ಮ ಆರಾಮದಾಯಕ ಜೀವನವನ್ನು ತೊರೆದರು.ತಮ್ಮ ನೆಲೆಯನ್ನು ಬಾಂಬೆಗೆ ಸ್ಥಳಾಂತರಿಸಿದ ನಂತರವೂ ಕೂಡ ಕಾರ್ಮಿಕರು ಹಾಗೂ ಪಕ್ಷದ ಕಾರ್ಯಾಚಟುವಟಿಗೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡರು.
ಹಿಂದಿ ಸಿನಿಮಾ ರಂಗಕ್ಕೆ ಪ್ರವೇಶ:
ಅಜ್ಮಿಯವರು ಚಲನಚಿತ್ರಗಳಲ್ಲಿ ಗೀತ ರಚನೆಕಾರ, ಬರಹಗಾರ ಮತ್ತು ನಟರಾಗಿ ಕಾರ್ಯನಿರ್ವಹಿಸಿದರು.1951 ರಲ್ಲಿ ಬಿಡುಗಡೆಯಾದ ಶಹೀದ್ ಲತೀಫ್ ನಿರ್ದೇಶಿಸಿದ ಬುಜ್ಡಿಲ್ ಮತ್ತು ಎಸ್‌ಡಿ ಬರ್ಮನ್ ಅವರ ಸಂಗೀತಕ್ಕಾಗಿ ಅಜ್ಮಿ ತಮ್ಮ ಮೊದಲ ಸಾಹಿತ್ಯವನ್ನು ರಚಿಸಿದರು. ಬರಹಗಾರರಾಗಿ ಅವರ ಆರಂಭಿಕ ಕೆಲಸ ಮುಖ್ಯವಾಗಿ ನನುಭಾಯ್ ವಕಿಲ್ ಅವರ ಯಾಹುದಿ ಕಿ ಬೇಟಿ (1956), ಪರ್ವಿನ್ (1957), ಮಿಸ್ ಪಂಜಾಬ್ ಮೇಲ್ (1958) ಮತ್ತು ಇದ್ ಕಾ ಚಂದ್ (1958). ಖ್ವಾಜಾ ಅಹ್ಮದ್ ಅಬ್ಬಾಸ್ ಮತ್ತು ಬಿಮಲ್ ರಾಯ್ ಅವರಂತಹ ನಿರ್ದೇಶಕರು ಹೊಸ ಸಿನೆಮಾ ರಚಿಸಲು ಶ್ರಮಿಸುತ್ತಿದ್ದರೆ, ಸಾಹಿರ್ ಲುಧಿಯಾನ್ವಿ, ಜಾನ್ ನಿಸಾರ್ ಅಖ್ತರ್, ಮಜ್ರೂಹ್ ಸುಲ್ತಾನ್ಪುರಿ ಮತ್ತು ಕೈಫಿಯಂತಹ ಲೇಖಕರು ಹಿಂದಿ ಚಲನಚಿತ್ರ ಸಾಹಿತ್ಯದ ಪರಿಭಾಷೆಯನ್ನು ಬದಲಾಯಿಸಿ ಹಿಂದಿಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದರು.
ಸಾಹಿತ್ಯ ಹಾಗೂ ಸಿನಿಮಾದಲ್ಲಿನ ಸಾಧನೆಗಾಗಿ ಅಜ್ಮಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ(1975) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ,ಉತ್ತರಪ್ರದೇಶ ಉರ್ದು ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಉರ್ದು ಅಕಾಡೆಮಿಯ ವಿಶೇಷ ಪುರಸ್ಕಾರ, ಸೋವಿಯತ್ ಲ್ಯಾಂಡ್ ನೆಹರು ಪುರಸ್ಕಾರ, ಆಫ಼್ರೋ-ಏಷಿಯನ್ ಬರಹಗಾರರ ಸಂಘದ ವತಿಯಿಂದ ಲೋಟಸ್ ಪುರಸ್ಕಾರ ಹಾಗು ರಾಷ್ಟ್ರೀಯ ಏಕೀಕರಣಕ್ಕಾಗಿ ರಾಷ್ಟ್ರಪತಿ ಪುರಸ್ಕಾರವನ್ನು ಪಡೆದಿರುತ್ತಾರೆ.
ಕೈಫಿ ಅಜ್ಮಿ ಅವರು ಮೇ 10 2002 ರಂದು ತಮ್ಮ 83 ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು.
- ಮಂಜುನಾಥ ನರಗುಂದ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.