ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019 ರ ಫಲಿತಾಂಶ ಹೊರಬಂದು ಸುಮಾರು ಎರಡು ವಾರಗಳು ಕಳೆಯುತ್ತಿದ್ದರೂ ಸರ್ಕಾರ ರಚನೆ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೋಮವಾರ ಬಿಜೆಪಿ ಅಧ್ಯಕ್ಷ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದರು. ಆದರೆ ಸರ್ಕಾರ ರಚನೆಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಲಿಲ್ಲ. ಏತನ್ಮಧ್ಯೆ, ಈ ಸಂಪೂರ್ಣ ವಿಷಯಕ್ಕೆ ಶಿವಸೇನೆ ಹೊಸ ತಿರುವನ್ನು ನೀಡಿದೆ.
ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಸಲಹೆಗಾರ ಕಿಶೋರ್ ತಿವಾರಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಅವರ ಹಸ್ತಕ್ಷೇಪಕ್ಕೆ ಒತ್ತಾಯಿಸಿದ್ದಾರೆ. ಅತ್ಯಂತ ಆದ್ಯತೆಯ ಈ ಪತ್ರದಲ್ಲಿ, ತಿವಾರಿ ಅವರು ಸರ್ಕಾರ ರಚನೆ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಧ್ಯಸ್ಥಿಕೆ ವಹಿಸುವಂತೆ ಸಂಘದ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿ ಮತ್ತು ಶಿವಸೇನೆ ನಡುವಿನ ವಿವಾದವನ್ನು ಒಮ್ಮತದಿಂದ ಬಗೆಹರಿಸಬಹುದು. ಈ ಹಿಂದೆ, ಹಲವಾರು ವಿಧಾನಸಭಾ ಚುನಾವಣೆಗಳು ಬಿಜೆಪಿಯ ಪರವಾಗಿ ನಿರೀಕ್ಷಿತ ಫಲಿತಾಂಶವನ್ನು ನೀಡದ ಕಾರಣ ಕಿಶೋರ್ ತಿವಾರಿ ಅವರು ಅಮಿತ್ ಶಾ ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ ಸುದ್ದಿಯಲ್ಲಿದ್ದರು.
'ಮಹಾ' ಸರ್ಕಾರಕ್ಕಾಗಿ ತಂತ್ರ ರೂಪಿಸುತ್ತಿರುವ ಪಕ್ಷಗಳು:
ಏತನ್ಮಧ್ಯೆ, ಅಮಿತ್ ಷಾ ಅವರನ್ನು ಭೇಟಿಯಾದ ನಂತರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇಂದು ಬಿಜೆಪಿಯ ಪ್ರಮುಖ ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಈ ಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತು ಮಾತುಕತೆ ನಡೆಯಲಿದೆ. ಇದರೊಂದಿಗೆ, ಶಿವಸೇನೆ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗುವ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಸಭೆಯ ನಂತರ, ಮೊದಲು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಯಾರು ಹೋಗುತ್ತಾರೆ ಮತ್ತು ರಾಜ್ಯದಲ್ಲಿ ಸರ್ಕಾರ ರಚಿಸುವ ಸೂತ್ರ ಯಾವುದು ಎಂಬುದರ ಬಗ್ಗೆಯೂ ತಂತ್ರ ಸಿದ್ಧಪಡಿಸಲಾಗುತ್ತದೆ. ಅಂದಹಾಗೆ, ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಇಂದು ಬೆಳಿಗ್ಗೆ ನಾಂದೇಡ್ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಅಲ್ಲಿ, ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳ ಬಗ್ಗೆ ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾದ ನಂತರ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಇಂದು ತಮ್ಮ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಎನ್‌ಸಿಪಿಯ ಮಿತ್ರಪಕ್ಷ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಭೇಟಿಯಾಗುವ ಸಾಧ್ಯತೆ ಇದೆ. ಈ ಸಭೆಯಲ್ಲಿ ರಾಜ್ಯದಲ್ಲಿ ಬಿಜೆಪಿ ರಹಿತ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಶಿವಸೇನೆ ಪೋಸ್ಟರ್‌ಗಳು:
ಏತನ್ಮಧ್ಯೆ, ಮಹಾರಾಷ್ಟ್ರ ಚುನಾವಣೆಯ ನಂತರ, ಇಡೀ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಬಿಜೆಪಿ ದೇವೇಂದ್ರ ಫಡ್ನವೀಸ್ ಅವರೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದರ್, ಶಿವಸೇನೆ ತನ್ನ ಯುವ ಮುಖಂಡ ಆದಿತ್ಯ ಠಾಕ್ರೆಯನ್ನು ಮುಂದಿನ ಸಿಎಂ ಎಂದು ಬಿಂಬಿಸುತ್ತಿದೆ. ಇದರಿಂದಾಗಿದೆ ಇಡೀ ವಿವಾದ ಸೃಷ್ಟಿಯಾಗಿದೆ. ಈ ಬಾರಿ ಮುಖ್ಯಮಂತ್ರಿ ಪಟ್ಟವನ್ನು ಪಡೆದೇ ತೀರುತ್ತೇವೆ ಎಂದು ಶಿವಸೇನೆ ಪಣತೊಟ್ಟಂತಿದೆ. ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ ರಾತ್ರೋ ರಾತ್ರಿ ಶಿವಸೇನೆ ಪೋಸ್ಟರ್‌ಗಳನ್ನು ಹಾಕಿದೆ. ಪೋಸ್ಟರ್ ಹಾಕುವ ಮೊದಲು, ಸೇನೆಯ ಹಿರಿಯ ಮುಖಂಡ ಏಕನಾಥ್ ಶಿಂಧೆ ಕೂಡ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಮಾತೋಶ್ರೀ ಗೆ ತಲುಪಿ ಮಾತುಕತೆ ನಡೆಸಿದರು.
ಮಹಾರಾಷ್ಟ್ರದಲ್ಲಿ ಇನ್ನೆರಡು ದಿನಗಳಲ್ಲಿ ಸರ್ಕಾರ ರಚನೆಯಾಗಬೇಕಿದೆ. ಇಲ್ಲವಾದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿದೆ. ಪ್ರಮುಖ ರಾಜಕೀಯ ಪಕ್ಷಗಳು ಮಾತುಕತೆ ಮೂಲಕ ನೂತನ ಸರ್ಕಾರ ರಚಿಸುವುದೇ? ಬಿಜೆಪಿ-ಶಿವಸೇನೆ ಮೈತ್ರಿ ಮುಂದುವರೆಯಲಿದೆಯೇ ಅಥವಾ ಮಹಾರಾಷ್ಟ್ರದಲ್ಲಿ ಇತರ ಪಕ್ಷಗಳೊಂದಿಗೆ ಕೈ ಜೋಡಿಸಿ ಶಿವಸೇನೆಯು ಬಿಜೆಪಿಯೇತರ ಸರ್ಕಾರ ರಚಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.