ರಾಜ್ಯಸಭೆಯಲ್ಲಿಂದು ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಲಿರುವ ಅಮಿತ್ ಶಾ

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡುವ ಹಿಂದೂ, ಕ್ರಿಶ್ಚಿಯನ್, ಸಿಖ್, ಬೌದ್ಧ ಮತ್ತು ಜೋಸ್ಟ್ರಿಯನ್ ಸಮುದಾಯಗಳ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲು ಯತ್ನಿಸುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಸೋಮವಾರ(ಡಿಸೆಂಬರ್ 9) ದೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಬಹುಮತದೊಂದಿಗೆ ಅಂಗೀಕರಿಸಲಾಯಿತು.  

Updated: Dec 11, 2019 , 08:30 AM IST
ರಾಜ್ಯಸಭೆಯಲ್ಲಿಂದು ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಲಿರುವ ಅಮಿತ್ ಶಾ

ನವದೆಹಲಿ: ಈಶಾನ್ಯದಲ್ಲಿ ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆಯ ಮಧ್ಯೆ,  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ (ಡಿಸೆಂಬರ್ 11) ಮಧ್ಯಾಹ್ನ 2 ಗಂಟೆಗೆ  ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ 2019(Citizenship Amendment Bill 2019) ಅನ್ನು  ಮಂಡಿಸಲಿದ್ದಾರೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡುವ ಹಿಂದೂ, ಕ್ರಿಶ್ಚಿಯನ್, ಸಿಖ್, ಬೌದ್ಧ ಮತ್ತು ಜೋಸ್ಟ್ರಿಯನ್ ಸಮುದಾಯಗಳ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲು ಯತ್ನಿಸುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಸೋಮವಾರ(ಡಿಸೆಂಬರ್ 9) ದೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಬಹುಮತದೊಂದಿಗೆ ಅಂಗೀಕರಿಸಲಾಯಿತು.  ಲೋಕಸಭೆಯಲ್ಲಿ ಮಸೂದೆ ಪರವಾಗಿ 311 ಸಂಸದರು ಮತ್ತು ವಿರುದ್ಧವಾಗಿ 80 ಮತ ಚಲಾವಣೆಗೊಂಡಿತು.

ಇಂದು ಈ ಮಹತ್ವದ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಳಿದೆ. ರಾಜ್ಯಸಭೆಯಲಿಲ್ ಐದು ಸ್ಥಾನಗಳು ಖಾಲಿ ಇರುವುದರಿಂದ ಸದ್ಯ  240 ಸಂಸದರು ಇದ್ದಾರೆ, ಆದ್ದರಿಂದ ಮಸೂದೆಯನ್ನು ಅಂಗೀಕರಿಸಲು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಕೇವಲ 121 ಸಂಸದರ ಬೆಂಬಲ ಬೇಕು. ಬಿಜೆಪಿಗೆ 83 ರಾಜ್ಯಸಭಾ ಸಂಸದರು ಇರುವುದರಿಂದ ಇದಕ್ಕೆ ಇನ್ನೂ 38 ಸಂಸದರ ಬೆಂಬಲ ಬೇಕಾಗುತ್ತದೆ.

ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವ ಹಲವಾರು ಪಕ್ಷಗಳು ಬಿಜೆಪಿಗೆ ಬೆಂಬಲ ನೀಡಲು ಸಜ್ಜಾಗಿವೆ. ಈ ಪಕ್ಷಗಳಲ್ಲಿ ಎಐಎಡಿಎಂಕೆ (11), ಜೆಡಿಯು (6), ಎಸ್‌ಎಡಿ (3), ಸ್ವತಂತ್ರರು ಮತ್ತು ರಾಜ್ಯಸಭೆಯಲ್ಲಿ ಇತರ 13 ಸಂಸದರು ಸೇರಿದ್ದಾರೆ. ಒಟ್ಟಿನಲ್ಲಿ ಇದು 116 ಸಂಸದರನ್ನು ಮಸೂದೆಗೆ ತಮ್ಮ ಬೆಂಬಲ ವ್ಯಕ್ತಪಡಿಸಳಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಡಿ (7), ವೈಎಸ್‌ಆರ್‌ಸಿಪಿ (2), ಮತ್ತು ಟಿಡಿಪಿ (2) ಸೇರಿದಂತೆ ಇತರ ಪಕ್ಷಗಳು ಸಹ ಆಡಳಿತ ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತವೆ. ಒಟ್ಟಾರೆಯಾಗಿ, ಬಿಜೆಪಿ ನೇತೃತ್ವದ ಸರ್ಕಾರವು 127 ಸಂಸದರೊಂದಿಗೆ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗುತ್ತದೆ.

ಬಿಜೆಪಿಯ ಮಾಜಿ ಮಿತ್ರ ಶಿವಸೇನೆ ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿತು, ಆದರೆ ಸೇನಾ (3 ಎಂಪಿ) ಮಂಗಳವಾರ (ಡಿಸೆಂಬರ್ 10) ರಾಜ್ಯಸಭೆಯಲ್ಲಿ ಮಸೂದೆಯನ್ನು ಬೆಂಬಲಿಸುವುದಿಲ್ಲ ಎಂಬ ಸುಳಿವು ನೀಡಿವೆ.

ಈ ವಿಷಯದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿವೆ. ರಾಜ್ಯಸಭೆಯಲ್ಲಿ 46 ಸಂಸದರನ್ನು ಹೊಂದಿರುವ ಕಾಂಗ್ರೆಸ್ ಮಸೂದೆಯ ವಿರುದ್ಧ ಬಹುಮತದ ಮತಗಳನ್ನು ಸಂಗ್ರಹಿಸಲು ಶ್ರಮಿಸುತ್ತಿದೆ. ಈ ಕುರಿತು ಮಂಗಳವಾರ ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ಇತರ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸಿದರು.

ಡಿಎಂಕೆ (5), ಆರ್‌ಜೆಡಿ (4), ಎನ್‌ಸಿಪಿ (4), ಕೆಸಿ (ಎಂ) -1, ಪಿಎಂಕೆ (1), ಐಯುಎಂಎಲ್ (1), ಎಂಡಿಎಂಕೆ (1), ಇನ್ನೂ ಒಬ್ಬ ಸಂಸದರೊಂದಿಗೆ, ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಮತಚಲಾಯಿಸುವವರ ಸಂಖ್ಯೆ 64 ಕ್ಕೆ ತಲುಪಲಿದೆ. ಯುಪಿಎ ಜೊತೆಗೆ ಟಿಎಂಸಿ (13), ಸಮಾಜವಾದಿ ಪಕ್ಷ (9), ಸಿಪಿಎಂ (5), ಬಿಎಸ್ಪಿ (4), ಎಎಪಿ (3), ಪಿಡಿಪಿ (2) ), ಸಿಪಿಐ (1), ಜೆಡಿಎಸ್ (1), ಮತ್ತು ಟಿಆರ್ಎಸ್ (6) ಮಸೂದೆಯ ವಿರುದ್ಧ ಮತ ಚಲಾಯಿಸುತ್ತವೆ. ಆದ್ದರಿಂದ ಯುಪಿಎ ಜೊತೆಗೆ ವಿರೋಧ ಪಕ್ಷಗಳ 44 ಸಂಸದರು ಮಸೂದೆಯ ವಿರುದ್ಧ ಮತ ಚಲಾಯಿಸಲಿದ್ದಾರೆ. ಬಿಜೆಪಿ ವಿರೋಧಿ ಪಕ್ಷಗಳ ಜೊತೆಗೆ ಯುಪಿಎಯ ಒಟ್ಟು ಅಂಕಿಅಂಶಗಳನ್ನು ನೋಡಿದರೆ 108 ಸಂಸದರು ಬರುತ್ತಾರೆ.

ಏತನ್ಮಧ್ಯೆ, ಪ್ರಸ್ತಾವಿತ ಮಸೂದೆಯನ್ನು ಸಂಸತ್ತಿನಿಂದ ಹಿಂತೆಗೆದುಕೊಳ್ಳುವಂತೆ ಲೇಖಕರು, ಕಲಾವಿದರು, ಮಾಜಿ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಸೇರಿದಂತೆ 600 ಕ್ಕೂ ಹೆಚ್ಚು ವ್ಯಕ್ತಿಗಳು ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಈಶಾನ್ಯದಲ್ಲಿ, ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ತಮ್ಮ ವಿರೋಧವನ್ನು ದಾಖಲಿಸಲು ವಿವಿಧ ಬುಡಕಟ್ಟು ಗುಂಪುಗಳು ಮತ್ತು ಯುವ ಸಂಘಟನೆಗಳು ಕೈಜೋಡಿಸಿದ್ದರಿಂದ ಸೋಮವಾರ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು. ತ್ರಿಪುರದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ನಾಲ್ವರು ಪೊಲೀಸರು ಮತ್ತು ಕೆಲವು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ತ್ರಿಪುರ ಸರ್ಕಾರ ಸೋಮವಾರ ಇಡೀ ರಾಜ್ಯದಲ್ಲಿ ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾ ಸೇವೆಗಳನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಲು ಆದೇಶಿಸಿದೆ. ಅಸ್ಸಾಂನಲ್ಲಿಯೂ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು, ಅಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಗುವಾಹಟಿಯ ಸಚಿವಾಲಯ ಮತ್ತು ಅಸೆಂಬ್ಲಿ ಕಟ್ಟಡಗಳ ಬಳಿ ಪ್ರತಿಭಟನೆ ನಡೆಸಿದರು.