ನವದೆಹಲಿ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಕೊಲೆ ಮಾಡಲು ಬಳಸಿದ ಆಯುಧವನ್ನು ಪತ್ತೆ ಹಚ್ಚಲು ಅರೇಬಿಯನ್ ಸಮುದ್ರದ ಆಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಮಹಾರಾಷ್ಟ್ರದ ಪರಿಸರ ಸಚಿವಾಲಯದಿಂದ ಅನುಮತಿ ಸಿಕ್ಕಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಪುಣೆ ನ್ಯಾಯಾಲಯಕ್ಕೆ ತಿಳಿಸಿದೆ.
ಅರೇಬಿಯನ್ ಸಮುದ್ರದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ವಿದೇಶಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ಸಿಬಿಐ ತಿಳಿಸಿದೆ. ಆಗಸ್ಟ್ 20, 2013 ರಂದು ದಾಭೋಲ್ಕರ್ ಬೆಳಿಗ್ಗೆ ವಾಕಿಂಗ್ ನಿಂದ ಮನೆಗೆ ಮರಳುತ್ತಿದ್ದಾಗ ಬೈಕ್ನಲ್ಲಿ ಬಂದ ದಾಳಿಕೋರರು ಅವರನ್ನು ಗುಂಡಿಕ್ಕಿ ಕೊಂದಿದ್ದರು.
ದಾಬೋಲ್ಕರ್ ಕೊಲೆ ಪ್ರಕರಣದ ಆರೋಪಿ ವಕೀಲ ಸಂಜೀವ್ ಪುಣಲೇಕರ್ ವಿರುದ್ಧ ವೈಚಾರಿಕವಾದಿಯನ್ನು ಗುಂಡಿಕ್ಕಿ ಕೊಂದ ಶರದ್ ಕಲ್ಸ್ಕರ್ ಗೆ ಸಹಾಯ ಮಾಡಿದ ಆರೋಪವಿದೆ. ಕಳೆದ ತಿಂಗಳು ಪುಣಲೇಕರ್ಗೆ ಪುಣೆ ಸೆಷನ್ಸ್ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು. ನರೇಂದ್ರ ದಾಬೋಲ್ಕರ್ ಹತ್ಯೆ ನಂತರ ಗೋವಿಂದ್ ಪನ್ಸಾರೆ, ಹಾಗೂ ಎಂ.ಎಂ ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೂಡ ಅದೇ ಮಾದರಿಯಲ್ಲಿ ಹತ್ಯೆ ಮಾಡಲಾಗಿತ್ತು. ಪೊಲೀಸರು ಇವರ ಹತ್ಯೆ ಒಂದಕ್ಕೊಂದು ಸಂಪರ್ಕವಿದೆ ಎಂದು ಹೇಳಿದ್ದರು.