ಹೆಣ್ಣು ಹೆತ್ತಿದ್ದಕ್ಕೆ ಫೋನ್‌ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ, ಪ್ರಕರಣ ದಾಖಲು

ಹೆಣ್ಣು ಮಗು ಎಂಬ ಕಾರಣಕ್ಕೆ ಫೋನಿನಲ್ಲಿಯೇ ಪತಿ ತಲಾಖ್ ನೀಡಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ.

Updated: Oct 20, 2019 , 09:04 AM IST
ಹೆಣ್ಣು ಹೆತ್ತಿದ್ದಕ್ಕೆ ಫೋನ್‌ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ, ಪ್ರಕರಣ ದಾಖಲು

ಲಕ್ನೋ: ಹೆಣ್ಣು ಮಗುವಿಗೆ ಜನ್ಮ ನೀಡಿದ ಸುದ್ದಿ ಕೇಳಿದ ಪತಿ ಫೋನಿನಲ್ಲಿಯೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಗಂಡನೊಂದಿಗೆ ಜಗಳ ಮಾಡಿಕೊಂಡು ತಾಯಿ ಮನೆಗೆ ಬಂದಿದ್ದ ಮಹಿಳೆ, ಈಗ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು, ಸುದ್ದಿ ತಿಳಿಸಲು ಪತಿಗೆ ಕರೆ ಮಾಡಿದಾಗ, ಆತ ಹೆಣ್ಣು ಮಗು ಎಂಬ ಕಾರಣಕ್ಕೆ ಫೋನಿನಲ್ಲಿಯೇ ತಲಾಖ್ ನೀಡಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ.

"ನಾನು 11 ವರ್ಷಗಳ ಹಿಂದೆ ಕಾಮಿಲ್ ನನ್ನು ಮದುವೆಯಾಗಿದ್ದೆ. ನನಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಅಕ್ಟೋಬರ್ 11ರಂದು ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ. ನನ್ನ ಪತಿ ಈ ಸುದ್ದಿ ಕೇಳಿದಾಗ, ಫೋನ್‌ನಲ್ಲೇ ತ್ರಿವಳಿ ತಲಾಖ್ ನೀಡಿದ್ದಾರೆ" ಎಂದು ಮಹಿಳೆ ದೂರಿದ್ದಾಳೆ.

ಈ ಸಂಬಂಧ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147, 452, 323, 504 ಮತ್ತು ಮುಸ್ಲಿಂ ಮಹಿಳೆಯರ 3/4 (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ್ ತಿಳಿಸಿದ್ದಾರೆ.