ಆಂಧ್ರ ಪ್ರದೇಶ: ಎರ್ರಮಟ್ಟಿ ಮಂಗಮ್ಮ ಎಂಬ ಮಹಿಳೆ 74ನೇ ವಯಸ್ಸಿನಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದವರಾದ ಎರ್ರಮಟ್ಟಿ ಮಂಗಮ್ಮ ಅವರು ಎರ್ರಾಮಟಿ ರಾಜ ರಾವ್ (ಈಗ 80) ಅವರನ್ನು ಮಾರ್ಚ್ 22, 1962 ರಂದು ವಿವಾಹವಾದರು. ಐದು ದಶಕಗಳ ಕಾಲ ಮಕ್ಕಳಿಗಾಗಿ ಹಂಬಲಿಸಿದ್ದ ದಂಪತಿಗೆ ಮಕ್ಕಳ ಭಾಗ್ಯ ಪ್ರಾಪ್ತಿಯಾಗಿದ್ದು, ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಇಂದು, ಗುಂಟೂರು ಪಟ್ಟಣದ ಅಹಲ್ಯಾ ನರ್ಸಿಂಗ್ ಹೋಂನ ವೈದ್ಯರು ಮಂಗಮ್ಮ ಸಿಸೇರಿಯನ್ ನಡೆಸಿದರು. ಸುಮಾರು 30 ನಿಮಿಷಗಳ ಕಾಲ ಸಿಸೇರಿಯನ್ ಮಾಡಿ ಹೆರಿಗೆ ಮಾಡಲಾಗಿದ್ದು, ಮಂಗಮ್ಮ ಇಬ್ಬರು ಪುತ್ರಿಯರಿಗೆ ಜನ್ಮ ನೀಡಿದ್ದಾರೆ. ನಾಲ್ಕು ಸ್ತ್ರೀರೋಗತಜ್ಞರು, ಇಬ್ಬರು ಶಿಶುವೈದ್ಯರು, ಇಬ್ಬರು ಅರಿವಳಿಕೆ ತಜ್ಞರು, ಒಬ್ಬ ಸಾಮಾನ್ಯ ವೈದ್ಯ ಮತ್ತು ಒಬ್ಬ ಹೃದ್ರೋಗ ತಜ್ಞರನ್ನು ಒಳಗೊಂಡ ತಜ್ಞರ ತಂಡವು ಕಾರ್ಯವಿಧಾನವನ್ನು ನಿರ್ವಹಿಸಿತು.
ಮಂಗಮ್ಮ ಅವರಿಗೆ ಸಿಸೇರಿಯನ್ ಮಾಡುವ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದು, ಸದ್ಯ ತಾಯಿ-ಮಕ್ಕಳು ಆರೋಗ್ಯದಿಂದ ಇದ್ದಾರೆ. ಆದರೆ, ವೀಕ್ಷಣೆಗಾಗಿ ಮುಂದಿನ 48 ಗಂಟೆಗಳವರೆಗೆ ಶಿಶುಗಳನ್ನು ಎನ್ಐಸಿಯು (ನವಜಾತ ತೀವ್ರ ನಿಗಾ ಘಟಕ) ದಲ್ಲಿ ಇಡಲಾಗುತ್ತದೆ ಎಂದು ದಂಪತಿಗೆ ಚಿಕಿತ್ಸೆ ನೀಡಿದ ಡಾ.ಶಾನಕ್ಯಾಲ ಉಮಾಶಂಕರ್ ತಿಳಿಸಿದ್ದಾರೆ.
74ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುತ್ತಿರುವ ಮಹಿಳೆ; ಬಹುಶಃ, ಭಾರತದಲ್ಲಿ ಇದೇ ಮೊದಲು!