ಸ್ವಲ್ಪ ಉದಾಸೀನ ಮಾಡಿದ್ದರೂ ಡಿಕೆಶಿಗೆ ಹಾರ್ಟ್ ಅಟ್ಯಾಕ್ ಆಗುತ್ತಿತ್ತು: ಸಿಂಘ್ವಿ

ದೆಹಲಿಯ ಫ್ಲಾಟ್ ಗಳಲ್ಲಿ ಪತ್ತೆಯಾಗಿರುವ 8.59 ಕೋಟಿ ರೂಪಾಯಿ ಡಿ.ಕೆ. ಶಿವಕುಮಾರ್​ ಅವರದಲ್ಲ. ಜಾರಿ ನಿರ್ದೇಶನಾಲಯದ ತನಿಖೆ ದುರುದ್ದೇಶ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ. ಜಾರಿ‌ ನಿರ್ದೇಶನಾಲಯ ಮಾಡುತ್ತಿರುವ ಆರೋಪದಂತೆ  ಯಾವುದೇ ಅವ್ಯವಹಾರ ನಡೆದಿಲ್ಲ- ಡಿ.ಕೆ. ಶಿವಕುಮಾರ್ ಪರ ವಕೀಲರು  

Last Updated : Sep 18, 2019, 10:40 AM IST
ಸ್ವಲ್ಪ ಉದಾಸೀನ ಮಾಡಿದ್ದರೂ ಡಿಕೆಶಿಗೆ ಹಾರ್ಟ್ ಅಟ್ಯಾಕ್ ಆಗುತ್ತಿತ್ತು: ಸಿಂಘ್ವಿ title=
File Image

ನವದೆಹಲಿ: ಡಿ.ಕೆ. ಶಿವಕುಮಾರ್ ಆರೋಗ್ಯದ ಬಗ್ಗೆ ಇನ್ನು ಸ್ವಲ್ಪ ಉದಾಸೀನ ಮಾಡಿದ್ದರೂ ಅವರಿಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಇತ್ತೆಂದು ವಕೀಲ ಅಭಿಷೇಕ್​ ಮನುಸಿಂಘ್ವಿ ಹೇಳಿದ್ದಾರೆ‌.

ಡಿ.ಕೆ. ಶಿವಕುಮಾರ್​ ಪರ ಮಂಗಳವಾರ ಹಿರಿಯ ವಕೀಲರಾದ ಅಭಿಷೇಕ್​ ಮನುಸಿಂಘ್ವಿ, ಮುಕುಲ್ ರೋಹ್ಟಗಿ ಮತ್ತು ದಯನ್ ಕೃಷ್ಣನ್ ವಾದ ಮಂಡಿಸಿದರು. ಮೊದಲು ವಾದ ಮಂಡಿಸಿದ ಸಿಂಘ್ವಿ, 'ಡಿ.ಕೆ. ಶಿವಕುಮಾರ್ ಅವರಿಗೆ ರಕ್ತದೊತ್ತಡ ಕಡಿಮೆಯಾಗಿಲ್ಲ. ಹೃದಯಾಘಾತ ಆಗುವ ಸಂಭವ ಇತ್ತು. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಹಾರ್ಟ್​ ಅಟ್ಯಾಕ್​ ಆಗುತ್ತಿತ್ತು. ಅವರು ಮಧುಮೇಹ, ರಕ್ತದೊತ್ತಡ, ಥೈರಾಯಿಡ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ. 3 ದಿನಗಳಿಂದ ಆರ್ ಎಂಎಲ್ ಆಸ್ಪತ್ರೆಯಲ್ಲಿ ಇದ್ದರು. ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಣಾಮಕಾರಿ ಇಂಜಕ್ಷನ್​ ನೀಡಲಾಗಿದೆ. ವೈದ್ಯಕೀಯ ವರದಿ ಆಧರಿಸಿ ಅವರಿಗೆ ಜಾಮೀನು ನೀಡಬೇಕು' ಎಂದು ಹೇಳಿದರು.

ದೆಹಲಿಯ ಫ್ಲಾಟ್ ಗಳಲ್ಲಿ ಪತ್ತೆಯಾಗಿರುವ 8.59 ಕೋಟಿ ರೂಪಾಯಿ ಡಿ.ಕೆ. ಶಿವಕುಮಾರ್​ ಅವರದಲ್ಲ. ಜಾರಿ ನಿರ್ದೇಶನಾಲಯದ ತನಿಖೆ ದುರುದ್ದೇಶ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ. ಜಾರಿ‌ ನಿರ್ದೇಶನಾಲಯ ಮಾಡುತ್ತಿರುವ ಆರೋಪದಂತೆ  ಯಾವುದೇ ಅವ್ಯವಹಾರ ನಡೆದಿಲ್ಲ. 20 ಖಾತೆಗಳಲ್ಲಿ 10 ವರ್ಷಗಳಿಂದ 64 ಲಕ್ಷ ರೂಪಾಯಿ ವ್ಯವಹಾರ ನಡೆದಿದೆ. ಆದರೆ ಡಿ.ಕೆ. ಶಿವಕುಮಾರ್​ ಅವರದ್ದು ಒಟ್ಟು 317 ಖಾತೆಗಳು ಇವೆ ಎಂದು ಜಾರಿ ನಿರ್ದೇಶನಾಲಯ ಕಾಲ್ಪನಿಕ ಕಥೆ ಹೇಳುತ್ತಿದೆ. ಅಲ್ಲದೆ 3 ಖಾತೆಗಳಿಂದ 200 ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎನ್ನುತ್ತಿದೆ. ಇದೆಲ್ಲವೂ ಆಧಾರ ರಹಿತ ಎಂದು ವಾದ ಮಾಡಿದರು.

ಇದಕ್ಕೂ ಮೊದಲು ಜಾರಿ‌ ನಿರ್ದೇಶನಾಲಯದ ಪರ ವಾದ ಮಾಡಿದ ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ನಾವು ಎರಡು ಅರ್ಜಿಗಳನ್ನು​ ಹಾಕುತ್ತಿದ್ದೇವೆ. ಮೊದಲನೆಯದಾಗಿ ಡಿ.ಕೆ. ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು. ನಂತರ ನ್ಯಾಯಾಂಗ ಬಂಧನದ ವೇಳೆ ವಿಚಾರಣೆ ನಡೆಸಲು ಅನುಮತಿ ನೀಡಬೇಕು. ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಡಾ. ರಾಮಮನೋಹರ ಆಸ್ಪತ್ರೆಗೆ ಸೇರಿಸಬೇಕಾಯಿತು. ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ನ್ಯಾಯಾಂಗ ಬಂಧನದಲ್ಲಿ ವಿಚಾರಣೆ ನಡೆಸಲು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.

Trending News