"ಪಶುಸಂಗೋಪನಾ ಸಚಿವರಿಗೆ ಮೇಕೆ, ದನಗಳು ಯಾವುದು ಎಂದು ಗೊತ್ತಿಲ್ಲ"

ಬಿಜೆಪಿ ಸರ್ಕಾರದ ಪಶುಸಂಗೋಪನಾ ಸಚಿವರಾದ ಪ್ರಭು ಚೌಹಾನ್‌ ಅವರಿಗೆ ಮೇಕೆ, ದನಗಳು ಎಂದರೆ ಯಾವು ಎಂಬುದೇ ಗೊತ್ತಿಲ್ಲ. ಸದನದಲ್ಲಿ ನನ್ನ ಪ್ರಶ್ನೆಗೆ ಕೂಡ ತಪ್ಪು ತಪ್ಪಾಗಿ ಲಿಖಿತ ಉತ್ತರ ನೀಡಿದ್ದರು. ಅವರ ವಿರುದ್ಧ ಸದನದ ಹಕ್ಕು ಚ್ಯುತಿ ಮಂಡಿಸಬಹುದಿತ್ತು ಆದರೆ ನೀನು ಪೆದ್ದ ಆಗಿರುವ ಕಾರಣಕ್ಕೆ ನಿನ್ನ ವಿರುದ್ಧ ಯಾವುದೇ ನೋಟಿಸ್‌ ನೀಡುವುದಿಲ್ಲ ಎಂದಿದ್ದೆ, ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

Written by - Prashobh Devanahalli | Edited by - Manjunath N | Last Updated : Feb 4, 2023, 06:55 PM IST
  • ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಯನ್ನು ನಿನ್ನೆಯಿಂದ ಆರಂಭ ಮಾಡಿದ್ದೇನೆ.
  • ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ ಎಂಬ ಕಾರಣಕ್ಕೆ ಪಕ್ಷದ ನಾಯಕರು ಎರಡು ತಂಡಗಳಾಗಿ ಮಾಡಿಕೊಂಡು ಯಾತ್ರೆಯನ್ನು ಮಾಡುತ್ತಿದ್ದೇವೆ.
  • ಮೊದಲ ಹಂತದ ಯಾತ್ರೆಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
"ಪಶುಸಂಗೋಪನಾ ಸಚಿವರಿಗೆ ಮೇಕೆ, ದನಗಳು ಯಾವುದು ಎಂದು ಗೊತ್ತಿಲ್ಲ" title=
file photo

ಬೀದರ್ : ಬಿಜೆಪಿ ಸರ್ಕಾರದ ಪಶುಸಂಗೋಪನಾ ಸಚಿವರಾದ ಪ್ರಭು ಚೌಹಾನ್‌ ಅವರಿಗೆ ಮೇಕೆ, ದನಗಳು ಎಂದರೆ ಯಾವು ಎಂಬುದೇ ಗೊತ್ತಿಲ್ಲ. ಸದನದಲ್ಲಿ ನನ್ನ ಪ್ರಶ್ನೆಗೆ ಕೂಡ ತಪ್ಪು ತಪ್ಪಾಗಿ ಲಿಖಿತ ಉತ್ತರ ನೀಡಿದ್ದರು. ಅವರ ವಿರುದ್ಧ ಸದನದ ಹಕ್ಕು ಚ್ಯುತಿ ಮಂಡಿಸಬಹುದಿತ್ತು ಆದರೆ ನೀನು ಪೆದ್ದ ಆಗಿರುವ ಕಾರಣಕ್ಕೆ ನಿನ್ನ ವಿರುದ್ಧ ಯಾವುದೇ ನೋಟಿಸ್‌ ನೀಡುವುದಿಲ್ಲ ಎಂದಿದ್ದೆ, ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಬೀದರ್‌ ಜಿಲ್ಲೆಯ ಔರಾದ್‌ ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತಾನ್ನಾಡಿ,ಒಂದೇ ಪ್ರಶ್ನೆಗೆ ನೀಡಿರುವ ಎರಡು ಉತ್ತರದಲ್ಲಿ 15 ಲಕ್ಷ ಜಾನುವಾರುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇತ್ತು, ಇಷ್ಟು ಜಾನುವಾರುಗಳನ್ನು ನೀನೇ ತಿಂದ್ಯನಪ್ಪಾ ಎಂದು ಕೇಳಿದ್ದೆ.ಚರ್ಮಗಂಟು ರೋಗ ಬಂದಿದೆ, ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿದ್ದೀರ ಎಂದು ಪ್ರಶ್ನೆ ಕೇಳಿದ್ದಕ್ಕೆ ಜನವರಿ 15ರೊಳಗೆ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸುತ್ತೇವೆ ಎಂದು ಹೇಳಿದ್ದರು, ಆದರೆ ಇನ್ನೂ 10 ರಿಂದ 15 ಲಕ್ಷ ಜಾನುವಾರಿಗಳಿಗೆ ಲಸಿಕೆ ಹಾಕಿಲ್ಲ. ಇಂಥಾ ಹಸಿ ಸುಳ್ಳು ಹೇಳೋರು ನಿಮ್ಮ ಶಾಸಕರಾಗಬೇಕ? ಎಂದು ಜನರಿಗೆ ಕೇಳಿದರು.

ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಯನ್ನು ನಿನ್ನೆಯಿಂದ ಆರಂಭ ಮಾಡಿದ್ದೇನೆ. ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ ಎಂಬ ಕಾರಣಕ್ಕೆ ಪಕ್ಷದ ನಾಯಕರು ಎರಡು ತಂಡಗಳಾಗಿ ಮಾಡಿಕೊಂಡು ಯಾತ್ರೆಯನ್ನು ಮಾಡುತ್ತಿದ್ದೇವೆ. ಮೊದಲ ಹಂತದ ಯಾತ್ರೆಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಕೂಡ ಔರಾದ್‌ ನಲ್ಲಿ ಜನ ನಾವು ನಿಮ್ಮೊಂದಿಗೆ ನಾವು ಇರುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಇದರರ್ಥ ಜನ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂಬ ತೀರ್ಮಾನ ಮಾಡಿದಂತಿದೆ.

ಇದನ್ನೂ ಓದಿ: IND vs AUS : ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಸ್ಪಿನ್ ಸುಲ್ತಾನ್, ಕಾಂಗರೂಗಳಿಗೆ ಶುರುವಾಗಿದೆ ಭಯ!

ಔರಾದ್‌ ನಿಂದ 27 ಜನ ಅರ್ಜಿ ಹಾಕಿದ್ದಾರೆ. ಎಲ್ಲರಿಗೂ ಟಿಕೇಟ್‌ ನೀಡಲು ಸಾಧ್ಯವಿಲ್ಲ. ಒಬ್ಬರಿಗೆ ಮಾತ್ರ ಟಿಕೇಟ್‌ ನೀಡಬಹುದು, ಟಿಕೇಟ್‌ ಸಿಗದೆ ಉಳಿದ 26 ಜನರು ಒಂದಾಗಿ ಕೆಲಸ ಮಾಡಿ ಪ್ರಭು ಚೌಹಾನ್‌ ಅವರನ್ನು ಸೋಲಿಸುವ ಕೆಲಸ ಮಾಡಬೇಕು. ಈ ಸಂಕಲ್ಪವನ್ನು ಇಂದಿನ ಸಮಾವೇಶದಲ್ಲಿ ಟಿಕೇಟ್ ಆಕಾಂಕ್ಷಿಗಳು ಮಾಡಬೇಕು.

ಬಿಜೆಪಿ ಪಕ್ಷ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿದ್ದಲ್ಲ, 113 ಸ್ಥಾನಗಳಲ್ಲಿ ಗೆದ್ದರೆ ಮಾತ್ರ ಆ ಸರ್ಕಾರಕ್ಕೆ ಜನಾಶೀರ್ವಾದ ಇದೆ ಎಂದರ್ಥ. ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 104, ಜೆಡಿಎಸ್‌ 37 ಮತ್ತು ಕಾಂಗ್ರೆಸ್‌ 80 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್‌ ಪಕ್ಷ 38.18% ಮತ, ಬಿಜೆಪಿ 36.42% ಮತಗಳನ್ನು ಪಡೆದಿತ್ತು. ಬಿಜೆಪಿ ನಮಗಿಂತ ಕಡಿಮೆ ಪ್ರಮಾಣದ ಮತಗಳನ್ನು ಪಡೆದಿದ್ದರೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿತ್ತು. ಇದೇ ಪ್ರಜಾಪ್ರಭುತ್ವದ ವೈಶಿಷ್ಟ್ಯ. ಸರ್ಕಾರ ರಚನೆಗೆ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ ರಾಜ್ಯಪಾಲರು, ಬಹುಮತ ಸಾಬೀತು ಮಾಡುವಂತೆ ತಿಳಿಸಿದರು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದ್ದರಿಂದ ಅವರ ಸರ್ಕಾರ ಬಿದ್ದುಹೋಯಿತು. ನಂತರ ನಾವು ಸರ್ಕಾರ ರಚನೆ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ, ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಕುಮಾರಸ್ವಾಮಿ ಸರ್ಕಾರ 1 ವರ್ಷ 2 ತಿಂಗಳಿಗೆ ಬಿದ್ದುಹೋಯಿತು. ಇದಕ್ಕೆ ಕಾರಣ ಕುಮಾರಸ್ವಾಮಿ ವೆಸ್ಟೆಂಡ್‌ ಹೋಟೆಲ್‌ ನಲ್ಲಿ ಉಳಿದುಕೊಂಡು ಶಾಸಕರು, ಸಚಿವರ ಭೇಟಿಗೆ ಅವಕಾಶ ನೀಡದಿರುವುದು.

ನಾಯಿ ಕಾದಿತ್ತು, ಅನ್ನ ಹಳಸಿತ್ತು ಎಂಬ ಗಾಧೆ ಮಾತಿನಂತೆ ಈ ಸಂದರ್ಭವನ್ನು ಕಾಯುತ್ತಿದ್ದ ಬಿಜೆಪಿಯವರು ಒಬ್ಬೊಬ್ಬ ಶಾಸಕರಿಗೆ 15 ರಿಂದ 20 ಕೋಟಿ ಹಣ ನೀಡಿ ಖರೀದಿಸಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆಪರೇಷನ್‌ ಕಮಲದ ಮೂಲಕ ಸರ್ಕಾರ ರಚನೆ ಮಾಡಿದರು. ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ನಾವು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದೆವು. ಸಮ್ಮಿಶ್ರ ಸರ್ಕಾರವನ್ನು ಕುಮಾರಸ್ವಾಮಿ ಅವರಿಂದ ಉಳಿಸಿಕೊಳ್ಳಲಾಗಲಿಲ್ಲ. ಅಲ್ಲಮಪ್ರಭು ಅವರ ಮಾತಿನಂತೆ ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ, ಶೂರನೂ ಅಲ್ಲ, ಹೀಗೆ ಕುಮಾರಸ್ವಾಮಿಗೆ ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗಲಿಲ್ಲ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿ ಪೂರ್ಣ 5 ವರ್ಷಗಳ ಕಾಲ ಆಡಳಿತ ನಡೆಸಿದ್ದೆ, ದೇವರಾಜ ಅರಸು ಅವರನ್ನು ಬಿಟ್ಟರೆ ಪೂರ್ಣಾವಧಿಗೆ ಆಡಳಿತ ನಡೆಸಿದ್ದು ನಾನು ಮಾತ್ರ.

2013ರಲ್ಲಿ ನಾವು ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ, ಅದರ ಜೊತೆಗೆ 30 ಹೊಸ ಕಾರ್ಯಕ್ರಮಗಳನ್ನು ಕೂಡ ಜಾರಿ ಮಾಡಿದ್ದೆವು. ಇದು ಬಸವಾದಿ ಶರಣರ ಕರ್ಮಭೂಮಿ, ನಾವು ಕೂಡ ಬಸವಾದಿ ಶರಣರಂತೆ ನುಡಿದಂತೆ ನಡೆದಿದ್ದೇವೆ. ಬಿಜೆಪಿ ಪಕ್ಷ 2018ರಲ್ಲಿ 600 ಭರವಸೆಗಳನ್ನು ನೀಡಿ ಅವುಗಳಲ್ಲಿ 50 ರಿಂದ 60 ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಬೇರೆಯವರ ತಾಕತ್‌, ಧಮ್‌ ಪ್ರಶ್ನೆ ಮಾಡುವ ಬಸವರಾಜ ಬೊಮ್ಮಾಯಿ ಒಂದೇ ವೇದಿಕೆಯ ಮೇಲೆ ಚುನಾವಣಾ ಪ್ರಣಾಳಿಕೆ ಮತ್ತು ಅವುಗಳ ಈಡೇರಿಕೆ ಬಗ್ಗೆ ಚರ್ಚೆಗೆ ಬರಲಿ. ಸ್ಥಳವನ್ನು ಕೂಡ ಬೊಮ್ಮಾಯಿ ಅವರೇ ನಿಗದಿ ಮಾಡಲಿ ಎಂದು ಸವಾಲು ಹಾಕಿದ್ದೆ, ಅದರ ಬಗ್ಗೆ ಈ ವರೆಗೆ ಬೊಮ್ಮಾಯಿ ಮಾತನಾಡಿಲ್ಲ. ಬಿಜೆಪಿ ಬಂದಮೇಲೆ ಒಂದೇ ಒಂದು ಹೊಸ ಮನೆ ನಿರ್ಮಾಣ ಮಾಡಿಕೊಟ್ಟಿಲ್ಲ.

ಇದನ್ನೂ ಓದಿ : World Cancer Day 2023: ಕ್ಯಾನ್ಸರ್ ವಕ್ಕರಿಸುವ ಮೊದಲು ದೇಹದಲ್ಲಾಗುತ್ತವೆ ಈ ಬದಲಾವಣೆ: ಗುರುತು ಕಂಡರೆ ತಕ್ಷಣ ಈ ರೀತಿ ಮಾಡಿ

ಇಂದು ಬೆಲೆಯೇರಿಗೆ ಗಗನಕ್ಕೇರಿದೆ. ಪೆನ್ನು, ಪೆನ್ಸಿಲ್‌, ಬುಕ್‌, ಮಂಡಕ್ಕಿ, ಹಾಲು, ಮೊಸರಿನ ಮೇಲೆ 18% ತೆರಿಗೆ ಹಾಕಿ ಬಡವರು ಬದುಕದಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ನಾವು ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿಯಂತೆ ವರ್ಷಕ್ಕೆ 24,000 ರೂ. ಮತ್ತು ಪ್ರತೀ ಮನೆಗೆ ತಿಂಗಳಿಗೆ 200 ಯುನಿಟ್‌ ಅನ್ನು ಉಚಿತವಾಗಿ ನೀಡಬೇಕು ಎಂದು ತೀರ್ಮಾನ ಮಾಡಿದ್ದೇವೆ.

ಕನ್ನಡ, ಹಿಂದಿ, ಮರಾಠಿ ಯಾವ ಭಾಷೆಯೂ ಪೂರ್ತಿಯಾಗಿ ಬಾರದ ಪ್ರಭು ಚೌಹಾನ್‌ ಅವರನ್ನು ನಿಮ್ಮ ಶಾಸಕರಾಗಿ ಮತ್ತೆ ಮಾಡಿಕೊಳ್ತೀರ? ನರೇಂದ್ರ ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು, ಆಗಿದೆಯಾ? ಮೋದಿ ಅವರ ಮೇಲೆ ಕೋಪ ಬರಲ್ವಾ? ಮನಮೋಹನ್‌ ಸಿಂಗ್‌ ಅವರ ಸರ್ಕಾರ ಇದ್ದಾಗ 50 ಕೆ.ಜಿ ಡಿಎಪಿ ಬೆಲೆ 450 ಇತ್ತು, ಇಂದು ಅದು 1350 – 1400 ರೂ. ಆಗಿದೆ.

ಈಗ ಅತ್ಯಂತ ಕೆಟ್ಟ, ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಇದನ್ನು ನೀವು ಇಷ್ಟು ಕಾಲ ಸಹಿಸಿಕೊಂಡಿದ್ದೀರಿ. ಮುಂದೆ ಮೇ ತಿಂಗಳಿನಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೇರು ಸಹಿತ ಕಿತ್ತು, ಕಾಂಗ್ರೆಸ್‌ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸುವ ಕೆಲಸ ಮಾಡಬೇಕು ಎಂದು ತಮ್ಮಲ್ಲಿ ಕೈಮುಗಿದು ಮನವಿ ಮಾಡುತ್ತೇನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News