ಬೆಂಗಳೂರು: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡುವಂತೆ ಜೆಡಿಎಸ್ ವರಿಷ್ಟರಿಗೆ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಸಮರ್ಥರನ್ನು ಪರಿಗಣಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಿದ್ದಾರೆ. ಯಾರನ್ನೇ ನೇಮಕ ಮಾಡಿದರೂ ಅವರ ಆದೇಶಕ್ಕೆ ನಾವು ಬದ್ಧ ಎಂದರಲ್ಲದೆ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಎಂದು ವಿಶ್ವನಾಥ್ ಒತ್ತಾಯಿಸಿದರು.
ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗ್ರಾಮವಾಸ್ತವ್ಯ ಒಂದು ಸಮರ್ಥನೀಯವಾದ ಪರಿಕಲ್ಪನೆ. ಗ್ರಾಮಗಳಿಗೆ ಮುಖ್ಯಮಂತ್ರಿಗಳು ಸ್ವತಃ ಭೇಟಿ ಕೊಟ್ಟು ಜನರ ದುಃಖ ದುಮ್ಮಾನಗಳನ್ನು ವಿಚಾರಿಸುವ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು. ಸರ್ಕಾರದ ಹಣ ಖರ್ಚಾಗುತ್ತೆ. ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಸಿಎಂ ಈ ಕಾರ್ಯವನ್ನು ಮತ್ತಷ್ಟು ವಿಸ್ತಾರವಾಗಿ ಮಾಡಬೇಕಿದೆ, ಸಿಎಂ ಅಷ್ಟೇ ಅಲ್ಲ, ಜಿಲ್ಲಾಧಿಕಾರಿಗಳೂ ಸಹ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕಿದೆ ಎಂದು ವಿಶ್ವನಾಥ್ ಹೇಳಿದರು.