ಕೊಪ್ಪಳ: ಉನ್ನತ ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಶಿಕ್ಷಣ ಪಡೆದ ನಂತರ ವೈದ್ಯರು ಖಾಸಗಿ ಸೇವೆಗಿಂತ ಸರ್ಕಾರಿ ಸೇವೆಗೆ ಹೆಚ್ಚಿನ ಆಸಕ್ತಿ ತೋರಲಿ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ (BC Patil) ಅಭಿಪ್ರಾಯಪಟ್ಟಿದ್ದಾರೆ.
ಪ್ರಗತಿಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಅಷ್ಟೇ ಅಲ್ಲದೇ ರಾಜ್ಯದ ಬಹುತೇಕ ಕಡೆ ಸರ್ಕಾರಿ ವೈದ್ಯರ ಕೊರತೆಯಿದೆ. ಇದಕ್ಕೆ ವೈದ್ಯರು ಖಾಸಗಿ ಸೇವೆಯತ್ತ ಹೆಚ್ಚು ಆಸಕ್ತಿ ತೋರುತ್ತಿರುವುದೇ ಕಾರಣ. ವೈದ್ಯರು (Doctors) ಸರ್ಕಾರಿ ಸೇವೆಗೆ ಹೆಚ್ಚಿನ ಆದ್ಯತೆಕೊಡಲಿ. ಇದರಿಂದ ಗ್ರಾಮೀಣ ಜನರಲ್ಲಿಯೂ ಸರ್ಕಾರಿ ವೈದ್ಯರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲು ಸಾಧ್ಯ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ತಾವು ಕಳೆದ ತಿಂಗಳು ಕೋವಿಡ್-19 ಲಾಕ್ಡೌನ್‌ನಿಂದ ರೈತರು ಮತ್ತು ಕೃಷಿ ಚಟುವಟಿಕೆಗಳ ಸ್ಥಿತಿಗತಿ ಬಗ್ಗೆ ಅರಿಯಲು ಭೇಟಿ ನೀಡಿ ಸಭೆ ನಡೆಸಲಾಗಿತ್ತು. ಈಗ ತಾವು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲು ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗಮಿಸಿರುವುದಾಗಿ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.