ಪ್ರಕಾಶ್ ರೈ ವಿರುದ್ದ ಬಿಜೆಪಿ ನಾಯಕರ ಆಕ್ರೋಶ

ಮೋದಿ ವಿರುದ್ಧ ನಟ, ನಿರ್ದೇಶಕ ಪ್ರಕಾಶ್ ರೈ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್ ಆಕ್ರೋಶ.

Updated: Oct 3, 2017 , 12:46 PM IST
ಪ್ರಕಾಶ್ ರೈ ವಿರುದ್ದ ಬಿಜೆಪಿ ನಾಯಕರ ಆಕ್ರೋಶ

ಬೆಂಗಳೂರು: ಡಿವೈಎಫ್‌ಐ 11ನೇ ರಾಜ್ಯ ಸಮ್ಮೇಳನದಲ್ಲಿ ಭಾಷಣದ ವೇಳೆ ನಟ, ನಿರ್ದೇಶಕ ಪ್ರಕಾಶ್ ರೈ ಪ್ರಧಾನಿ ಮೋದಿ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೈ ಹೇಳಿಕೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಟೀಕೆ ಮಾಡುವುದರಿಂದ ಯಾವ ವ್ಯಕ್ತಿಯೂ ದೊಡ್ದವರಾಗುವುದಿಲ್ಲಾ... ದೇಶದ ಹಿತದೃಷ್ಟಿಯಿಂದ ಮೋದಿಯವರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಯಾರೊಬ್ಬರ ಟೀಕೆಯು ಮೋದಿಯವರನ್ನು ಕುಗ್ಗಿಸಲು ಸಾಧ್ಯವಿಲ್ಲ. ತಜ್ಞರ ಸಲಹೆ ಪಡೆದೆ ಪ್ರಧಾನಿಗಳು ಅತ್ಯಂತ ಯಶಸ್ವಿಯಾಗಿ ಆಡಿತ ನಡೆಸುತ್ತಿದ್ದಾರೆ ಎಂದು ರೈ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

ರೈ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ಸುರೇಶ್ ಕುಮಾರ್, ಕಾವೇರಿ ಬಗ್ಗೆ ಪ್ರಶ್ನೆ ಕೇಳಿದಾಗ ನಾನೊಬ್ಬ ನಟ ಎಂದು ಹೇಳಿದ್ದ ರೈ, ಈಗ ಡಿವೈಎಫ್ಐ ಕಾರ್ಯಕ್ರಮದಲ್ಲಿ ವೇದಿಕೆಗೆ ತಕ್ಕಂತೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಹತ್ಯೆಗಳಾಗುತ್ತಿದ್ದರು ಕಾಣಿಸಿಕೊಂಡಿರಲಿಲ್ಲ... ಆಗ ಕಾಣಿಸಿಕೊಳ್ಳದ ಪ್ರಕಾಶ್ ರೈ ಈಗ ದಿಢೀರನೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಚಪ್ಪಾಳೆ ತಟ್ಟುತ್ತಾರೆ ಎಂಬ ಮನಸ್ಥಿತಿಯಲ್ಲಿ ವೇದಿಕೆ ಮೇಲೆ ಹುಚ್ಚುಚ್ಚಾಗಿ ಮಾತನಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.