ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಶಾಸಕ ಮಾಧುಸ್ವಾಮಿ!

ಚುನಾವಣಾ ಚಾಣಾಕ್ಷ ಅಮಿತ್ ಶಾ ಗೂ ಕಾಡ್ತಾ ಇದಿಯಾ ಅತೃಪ್ತರ ಭಯ?

Last Updated : Jul 25, 2019, 11:15 AM IST
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಶಾಸಕ ಮಾಧುಸ್ವಾಮಿ! title=
Pic Courtesy: ANI

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾದ ಬಳಿಕ ಬಿಜೆಪಿ ಸರ್ಕಾರ ಗುರುವಾರವೇ ಅಧಿಕಾರಕ್ಕೆ ಬರಲಿದೆ ಎಂದು ಊಹಿಸಲಾಗಿತ್ತು. ಅದ್ಯಾಕೋ ಏನೋ ಸರ್ಕಾರ ರಚಿಸುವಲ್ಲಿ ಉತ್ಸುಕತೆ ಇದ್ದರೂ ಕೂಡ ಕಮಲ ಪಾಳಯದಲ್ಲಿ ಏನೋ ಒಂದು ರೀತಿಯ ಗೊಂದಲ ಮನೆ ಮಾಡಿದೆ.

ಈ ಹಿಂದೆ ಆತುರಾತುರವಾಗಿ ಸರ್ಕಾರ ರಚನೆಗೆ ಮುಂದಾಗಿ ಮುಖಭಂಗ ಅನುಭವಿಸಿರುವ ಬಿಜೆಪಿ, ಇದೀಗ ಸರ್ಕಾರ ರಚನೆಯ ಬಗ್ಗೆ ಎಲ್ಲಾ ಆಯಾಮಗಳಲ್ಲೂ ಯೋಚಿಸಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಮೈತ್ರಿ ಪಾಳಯದಲ್ಲಿ 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಈಗಿರುವ ಸಂಖ್ಯಾ ಬಲ ನೋಡಿದರೆ ಬಿಜೆಪಿಗೆ ಹೆಚ್ಚು ಬಲವಿದೆ. ಹಾಗಿದ್ದೂ ಬಿಜೆಪಿ ನಾಯಕರೇಕೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಬಗ್ಗೆ ಮಾತನಾಡುತ್ತಿಲ್ಲ. ಚುನಾವಣಾ ಚಾಣಾಕ್ಷ ಅಮಿತ್ ಶಾ ಗೂ ಕಾಡ್ತಾ ಇದಿಯಾ ಅತೃಪ್ತರ ಭಯ? ಎಂಬೆಲ್ಲಾ ಪ್ರಶ್ನೆಗಳು ಉದ್ಭವವಾಗಿದೆ.

ಅಮಿತ್ ಶಾ ಭೇಟಿಗಾಗಿ ದೆಹಲಿಗೆ ಆಗಮಿಸಿದ ರಾಜ್ಯ ಬಿಜೆಪಿ ನಿಯೋಗ: ಬಿಜೆಪಿ ಚಿತ್ತ ವರಿಷ್ಠರತ್ತ!

ಈ ಮಧ್ಯೆ, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ, ಸರ್ಕಾರ ರಚನೆ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ರಾಜ್ಯ ಬಿಜೆಪಿ ನಿಯೋಗ ಗುರುವಾರ ದೆಹಲಿಗೆ ತಲುಪಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಮಾಧುಸ್ವಾಮಿ,  ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಮೈತ್ರಿ ಸರ್ಕಾರದಿಂದ ಬೇಸತ್ತು ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಬಗ್ಗೆ ಸ್ಪೀಕರ್ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದು ಹಲವಾರು ಗೊಂದಲಗಳಿಗೆ ಕಾರಣವಾಗಿದೆ. ಹೈಕಮಾಂಡ್ ಗೂ ಈ ಬಗ್ಗೆ ಗೊಂದಲಗಳಿವೆ ಎಂದು ತಿಳಿಸಿದ್ದಾರೆ.

ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಂಡು‌ ಪತನವಾಗಿದೆ. ಬಿಜೆಪಿ ಸರ್ಕಾರ ರಚನೆಗಾಗಿ ಪಕ್ಷದ ವರಿಷ್ಠರ ಸಲಹೆ, ಮಾರ್ಗದರ್ಶನ ಪಡೆಯುವ ಹಿನ್ನೆಲೆಯಲ್ಲಿ ಹೈಕಮಾಂಡ್ ಭೇಟಿಗೆ ಬಂದಿದ್ದೇವೆ. ಅಮಿತ್ ಶಾ ಭೇಟಿಯಾಗಿ ರಾಜ್ಯದ ಬೆಳವಣಿಗೆ ವಿವರಿಸಲಿದ್ದೇವೆ. ಹೈಕಮಾಂಡ್ ನಿರ್ದೇಶನದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ರಾಜೀನಾಮೆ ನೀಡಿರುವ 15 ಅತೃಪ್ತ ಶಾಸಕರ ಬಗ್ಗೆ ಸ್ಪೀಕರ್ ಇನ್ನೂ ಯಾವುದೇ ತೀರ್ಮಾನ ಕೈಗೊಳ್ಳದೇ ಇರುವುದರಿಂದಲೇ ಬಿಜೆಪಿ ಸರ್ಕಾರ ರಚನೆ ವಿಳಂಬಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿರುವ ಮಾಧುಸ್ವಾಮಿ, ಅದರ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.

ಅತೃಪ್ತ ಶಾಸಕರು ವಾಪಸ್ ಮೈತ್ರಿ ಸರ್ಕಾರದ ಮೇಲೆ  ವಿಶ್ವಾಸ ಕಳೆದುಕೊಂಡಿದ್ದಾರೆ, ಅವರೆಲ್ಲರೂ ಅವರ ಪಕ್ಷಕ್ಕೆ ಹೋಗುವ ಲಕ್ಷಣಗಳಿಲ್ಲ. ಅದಲ್ಲದೆ ಅತೃಪ್ತರು ವಾಪಸ್ ಹೋಗಿ ಅವರ ಪಕ್ಷ ಸೇರುವುದು ಅಸಾಧ್ಯ. ಏತನ್ಮಧ್ಯೆ, ಬಿಎಸ್​ಪಿ ಶಾಸಕ ಮಹೇಶ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಇದನೆಲ್ಲ ಹೈಕಮಾಂಡ್ ಗೆ ವಿವರಿಸುತ್ತೇವೆ ಎಂದು ಅವರು ತಿಳಿಸಿದರು.

Trending News