ಸಮ್ಮಿಶ್ರ ಸರ್ಕಾರದ ವಿರುದ್ಧ ಮೇ 6ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಸ್ವತಃ ಧರ್ಮ ವಿಭಜನೆಗೆ ಯತ್ನಿಸಿದ ಸಚಿವ ಎಂ.ಬಿ.ಪಾಟೀಲರ ದ್ವೇಷ ರಾಜಕಾರಣವನ್ನು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಮೇ 6ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಮುಂದಾಗಿದೆ.

Updated: May 5, 2019 , 07:48 AM IST
ಸಮ್ಮಿಶ್ರ ಸರ್ಕಾರದ ವಿರುದ್ಧ ಮೇ 6ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಮಂತ್ರಿಗಳು ಅಧಿಕಾರ ದುರುಪಯೋಗಪಡಿಸಿ ವಿರೋಧ ಪಕ್ಷವನ್ನು ಹತ್ತಿಕ್ಕುವ ದ್ವೇಷ ರಾಜಕಾರಣದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿ ಮೇ 6 ರಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಈ ಬಗ್ಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವ ಸುಳಿವು ಸಿಕ್ಕ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ದ್ವೇಷದ ರಾಜಕಾರಣ ಮಿತಿ ಮೀರಿದೆ. ರಾಜಕೀಯ ವಿರೋಧಿಗಳು ಮತ್ತು ಮಾಧ್ಯಮದ ವಿರುದ್ಧವೂ ಸರ್ಕಾರ ಪ್ರತಿಕಾರಕ್ಕೆ ಮುಂದಾಗಿರುವುದು ಸ್ಪಷ್ಟವಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ ಎಂದಿದ್ದಾರೆ.

ಈ ಹಿಂದೆ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನ ಮಂತ್ರಿಯನ್ನು ಹತ್ಯೆ ಮಾಡುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದರು. ಅದೇ ರೀತಿ ಜೆಡಿಎಸ್ ಶಾಸಕರಾದ ನಾರಾಯಣಗೌಡ ಅವರು ನಟರಾದ ದರ್ಶನ್, ಯಶ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಆದರೆ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿ ಬೆದರಿಕೆ ಹಾಕಲು ಪೊಲೀಸರನ್ನು ದ್ರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಐಪಿಸಿ ಸೆಕ್ಷನ್ 307ರ ಅಡಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾಗಿದ್ದರೂ ಕೇವಲ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಿಂಚಿತ್ತೂ ಬೆಲೆಯಿಲ್ಲ. ಸ್ವತಃ ಧರ್ಮ ವಿಭಜನೆಗೆ ಯತ್ನಿಸಿದ ಸಚಿವ ಎಂ.ಬಿ.ಪಾಟೀಲರ ದ್ವೇಷ ರಾಜಕಾರಣವನ್ನು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಮೇ 6ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ.