ನವದೆಹಲಿ: ಹನುಮ ಜಯಂತಿ ಆಚರಣೆ ವೇಳೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಭಾನುವಾರ ಬಂಧಿಸಿದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಉಲ್ಲಂಘನೆ ಮಾಡಿದಕ್ಕಾಗಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಮಾಡುತ್ತಿದ್ದೆಯಾ? ಎಂದು ಗುಡುಗಿದ್ದಾರೆ.
ಕಾನೂನು ಉಲ್ಲಂಘನೆ ಮಾಡುವವರನ್ನು ಬಂಧನ ಮಾಡುವುದರಲ್ಲಿ ಯಾವ ತಪ್ಪಿಲ್ಲ, ಹನುಮ ಜಯಂತಿ ಆಚರಣೆಗೆ ನಾವು ಆಕ್ಷೇಪ ಮಾಡಿರಲಿಲ್ಲ, ಅದಕ್ಕಾಗಿ ಭಧ್ರತೆಯನ್ನು ಪೊಲೀಸ್ ನೀಡಲಾಗಿತ್ತು. ಕಾನೂನು ಸುವ್ಯವಸ್ಥೆ ಹಿನ್ನೆಲೆ ಪೊಲೀಸ್ ಮೆರವಣಿಗೆಗೆ ಮಾರ್ಗ ಸೂಚಿ ನೀಡಿದ್ದರು. ಅದನ್ನು ಪಾಲಿಸದೇ ಪ್ರತಾಪ್ ಸಿಂಹ ತಮ್ಮ ಹೊಸ ಮಾರ್ಗಕ್ಕಾಗಿ ಪಟ್ಟು ಹಿಡಿದರು ಎಂದು ಸಿಎಂ ವಿವರಿಸಿದರು.
ಮುಂದುವರೆದು ಮಾತನಾಡಿದ ಸಿಎಂ ಪೊಲೀಸ್ ಬಂದೋಬಸ್ತ್ ಇಲ್ಲದೆ ಅವರು ಕೇಳಿದ ಕಡೆಯಲ್ಲ ಅವಕಾಶ ಕೊಡಲು ಹೇಗೆ ಸಾಧ್ಯ? ಕೊಮುಗಲಭೆಯಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಸಂಸದ ಪ್ರತಾಪ್ ಸಿಂಹ ನಿಯಮ ಉಲ್ಲಂಘಿಸಿ ಪೊಲೀಸರು ಹಾಕಿದ ಬ್ಯಾರಿಕೇಡ್ ಮೇಲೆ ಕಾರು ಚಲಾವಣೆ ಮಾಡಿದ್ದಾರೆ. ಕಾನೂನು ಮಾಡುವ ನಾವು ಕಾನೂನು ಗೌರವಿಸದೇ ಉಲ್ಲಂಘನೆ ಮಾಡಿದರೆ ಹೇಗೆ? ಒಬ್ಬ ಸಂಸದನಾಗಿ ಪ್ರತಾಪ್ ಸಿಂಹ ಮಾಡಿದ್ದು ಸರಿಯಾ? ಎಂದು ಪ್ರಶ್ನಿನಿಸಿದ ಸಿಎಂ, ಪ್ರತಾಪ್ ಸಿಂಹ ಮೇಲೆ ಜಾಮೀನು ರಹಿತ ಕೇಸ್ಗಳು ದಾಖಲಾಗಿವೆ. ಸಂಸದರಾದ ಹಿನ್ನೆಲೆ ಪ್ರತಾಪ್ ಸಿಂಹ ಅವರನ್ನ ಬಿಟ್ಟು ಕಳಿಸಲಾಗಿದೆ ಎಂದು ಇದೇ ತಿಳಿಸಿದರು.
ಹೈಕಮಾಂಡ್ ಮೆಚ್ಚಿಸಲು ಪ್ರತಾಪ್ ಸಿಂಹ ಹೀಗೆ ಮಾಡುತ್ತಿದ್ದಾರೆ. ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ತರಾಟೆ ತೆಗೆದುಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಸಿಎಂ ಪ್ರತಾಪ್ ಸಿಂಹರ ನಡವಳಿಕೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.