ಉಪಚುನಾವಣೆ: ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಹಣದ ಹೊಳೆ!

ಹುಣಸೂರು ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಎರಡು ಕೋಟಿ ರೂಪಾಯಿಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

Last Updated : Nov 27, 2019, 10:59 AM IST
ಉಪಚುನಾವಣೆ: ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಹಣದ ಹೊಳೆ! title=
Representational image

ಮೈಸೂರು: ಉಪಚುನಾವಣೆಯಲ್ಲಿ ಹಣದ ಹೊಳೆಯೇ ಹರಿಸಲಾಗುತ್ತಿದೆ ಎಂಬ ಆರೋಪ ಪ್ರತ್ಯಾರೋಪಗಳನ್ನು ದಿನಬೆಳಗಾದರೆ ಕೇಳುತ್ತಲೇ ಇರುತ್ತೇವೆ. ಏತನ್ಮಧ್ಯೆ, ಹುಣಸೂರು ವಿಧಾನಸಭಾ ಕ್ಷೇತ್ರ(Hunsur assembly constituency)ದ ವ್ಯಾಪ್ತಿಯಲ್ಲಿ ಲೆಕ್ಕವಿಲ್ಲದ ಎರಡು ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. 

ಉಪಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳಲ್ಲೂ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಅಧಿಕಾರಿಗಳು, ಹುಣಸೂರು ಕ್ಷೇತ್ರದ ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಎರಡು ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮೂರು ಚೀಲಗಳಲ್ಲಿ ಹಣಕೊಂಡೊಯ್ಯಲಾಗುತ್ತಿತ್ತು. ವಿಶೇಷವೆಂದರೆ ಹಣ ಸಾಗಿಸುತ್ತಿದ್ದ ವಾಹನದಲ್ಲಿ ಎಂಡಿಸಿಸಿ ಬ್ಯಾಂಕಿನ ಇಬ್ಬರು ನೌಕರರಿದ್ದದ್ದು. ಈ ಹಣವನ್ನು ಪಿರಿಯಾಪಟ್ಟಣ ಬ್ಯಾಂಕಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. 

ಆ ಇಬ್ಬರೂ ನೌಕರರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು ಹಣ ಸಾಗಿಸುತ್ತಿದ್ದಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಿದ್ದಾರೆ. 

ಸದ್ಯ ನಾಲ್ಕನೇ ಬಾರಿಗೆ ಉಪಚುನಾವಣೆಗೆ ಸನ್ನದ್ಧವಾಗಿರುವ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ(BJP), ಕಾಂಗ್ರೆಸ್(Congress) ಹಾಗೂ ಜೆಡಿಎಸ್(JDS) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಎಚ್.ವಿಶ್ವನಾಥ್(H Vishwanath) ಗೆದ್ದು ಶಾಸಕರಾಗಿದ್ದರು. ಆದರೆ, ಬಳಿಕ ರಾಜ್ಯದಲ್ಲಿ ತಲೆ ಎತ್ತಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು, ರಾಜೀನಾಮೆ ನೀಡುವ ಮೂಲಕ ಸರ್ಕಾರ ಬೀಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ವಿಶ್ವನಾಥ್ ಬಿಜೆಪಿ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇನ್ನು ಶತಾಯಗತಾಯ ವಿಶ್ವನಾಥ್ ಅವರನ್ನು ಸೋಲಿಸಲೇ ಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್​ನಿಂದ ಎಚ್​.ಪಿ.ಮಂಜುನಾಥ್ ಹಾಗೂ ಜೆಡಿಎಸ್​ನಿಂದ ಸೋಮಶೇಖರ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಜೊತೆಗೆ ಸೇರಿರುವುದಾಗಿ ಹೇಳಿಕೊಂಡಿರುವ ಎಚ್. ವಿಶ್ವನಾಥ್ ಮತ್ತೆ ಅದೇ ಕ್ಷೇತ್ರದಿಂದ ಶಾಸಕರಾಗುವ ಕನಸು ಕಾಣುತ್ತಿದ್ದರೆ, ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋಲುಂಡಿದ್ದ ಕಾಂಗ್ರೆಸ್​ನ ಎಚ್​.ಪಿ.ಮಂಜುನಾಥ್ ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಕನಸನ್ನು ನನಸಾಗಿಸಿಕೊಳ್ಳುವ ತವಕದಲ್ಲಿದ್ದಾರೆ. ಇನ್ನು ಪಕ್ಷದಲ್ಲಿ ರಾಜ್ಯಾಧ್ಯಕ್ಷರ ಸ್ಥಾನಮಾನ ನೀಡಿ ಗೌರವದಿಂದ ನಡೆಸಿಕೊಂಡಿದ್ದರೂ ಕುಮಾರಸ್ವಾಮಿ ಸರ್ಕಾರಕ್ಕೆ ಮುಳುವಾಗಿ ಅವರ ಸರ್ಕಾರವನ್ನು ಉರುಳಿಸಲು ವಿಶ್ವನಾಥ್ ಅವರೇ ಪ್ರಮುಖ ಕಾರಣ ಕರ್ತರು ಎಂದು ವಿಶ್ವನಾಥ್ ವಿರುದ್ಧ ಕೆಂಡಾಮಂಡಲಗೊಂಡಿರುವ ಜೆಡಿಎಸ್ ಕಾರ್ಯಕರ್ತರು ಶತಾಯಗತಾಯ ಅವರನ್ನು ಮಣಿಸಲೇ ಬೇಕು ಎಂದು ಪಣತೊಟ್ಟಿದ್ದಾರೆ. ಇನ್ನು ಜೆಡಿಎಸ್​ನಿಂದ ಸ್ಪರ್ಧಿಸಿರುವ ಸೋಮಶೇಖರ್ ಸ್ಥಳೀಯ ಅಭ್ಯರ್ಥಿಯಾಗಿದ್ದು, ಇವರ ಗೆಲುವಿಗೆ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. 

Trending News