ಪ್ರವಾಹಕ್ಕೆ ತತ್ತರಿಸಿದ ಕೊಡಗನ್ನು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯಾಚರಣೆ

ಕೊಡಗಿನಲ್ಲಿ ಉಂಟಾದ ಪ್ರವಾಹದಿಂದಾಗಿ ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, 773 ಭಾಗಶ: ಹಾನಿಯಾಗಿದೆ. 123 ಕಿ.ಮೀ. ರಸ್ತೆ, 58 ಸೇತುವೆ,  278 ಸರ್ಕಾರಿ ಕಟ್ಟಡ, 3800 ವಿದ್ಯುತ್ ಕಂಬ ಹಾನಿಗೊಳಗಾಗಿವೆ.  ಹಲವು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ.  

Last Updated : Aug 21, 2018, 10:51 AM IST
ಪ್ರವಾಹಕ್ಕೆ ತತ್ತರಿಸಿದ ಕೊಡಗನ್ನು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯಾಚರಣೆ  title=

ಬೆಂಗಳೂರು: ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು , 12 ಜನ ಮೃತಪಟ್ಟಿದ್ದಾರೆ. ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, 773 ಭಾಗಶ: ಹಾನಿಯಾಗಿದೆ. 123 ಕಿ.ಮೀ. ರಸ್ತೆ, 58 ಸೇತುವೆ,  278 ಸರ್ಕಾರಿ ಕಟ್ಟಡ, 3800 ವಿದ್ಯುತ್ ಕಂಬ ಹಾನಿಗೊಳಗಾಗಿವೆ.  ಹಲವು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಸೋಮವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಡಗಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸೋಮವಾರ ಬೆಳಿಗ್ಗೆ 10.00 ಗಂಟೆವರೆಗೆ 4,320 ಜನರನ್ನು ಆಪತ್ತಿನಿಂದ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಭಾನುವಾರದಿಂದ ಮಳೆಯ ಭೀಕರತೆ ಸ್ಪಲ್ಪ ತಗ್ಗಿರುವುದರಿಂದ, ಪರಿಹಾರ ಕಾರ್ಯಗಳನ್ನು ಚುರುಕುಗೊಂಡಿವೆ ಎಂದು ತಿಳಿಸಿದರು.

ಪ್ರತಿ ದಿನ  24 ಗಂಟೆಗಳ ಕಾಲ ಪರಿಹಾರ ಕಾರ್ಯ:
ಜಿಲ್ಲಾಡಳಿತ , ಪೊಲೀಸ್ ಇಲಾಖೆ, ಕರ್ನಾಟಕ ಸಶಸ್ತ್ರ ಮೀಸಲು ಪಡೆ, ಭೂ ಸೇನೆ, ವಾಯು ಪಡೆ, ನೌಕಾ ದಳ, ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್ಡಿಆರ್ಎಫ್) ತಂಡಗಳು, ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧಿಕಾರಿಗಳು, ಎನ್ಸಿಸಿ, ನಾಗರೀಕ ರಕ್ಷಣಾ ದಳ, ಗೃಹ ರಕ್ಷಕ ದಳ ಸೇರಿದಂತೆ ಒಟ್ಟು 1725 ವಿಶೇಷ ತರಬೇತಿ ಪಡೆದ ತಜ್ಞರು ಯುದ್ಧೋಪಾದಿಯಲ್ಲಿ ಪ್ರತಿ ದಿನ  24 ಗಂಟೆಗಳ ಕಾಲ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ವಾಯುಪಡೆಯ ಎಂ-17 ಹೆಲಿಕಾಪ್ಟರ್ ಹಾರಂಗಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.

ಕೊಡಗಿನ ಮಾಹಿತಿ ಪಡೆದ ರಾಷ್ಟ್ರಪತಿ, ಪ್ರಧಾನಿ, ರಕ್ಷಣಾ ಸಚಿವರು 
ಪ್ರತಿ ದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನಿರಂತರ ಮಾಹಿತಿಯನ್ನು ಒದಗಿಸುತ್ತಿದ್ದಾರೆ. ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಕೇಂದ್ರ ರಕ್ಷಣಾ ಸಚಿವರು ದೂರವಾಣಿ ಮೂಲಕ ಮಾತನಾಡಿ, ಪರಿಸ್ಥಿತಿಯ ವಿವರ ಪಡೆದಿರುತ್ತಾರೆ. ಪೂರ್ಣ ಸಹಕಾರವನ್ನು ನೀಡಿದ್ದಾರೆ. ಅವರಿಗೆ ಅಭಾರಿ. ಸೋಮವಾರ ಮಧ್ಯಾಹ್ನ ಮುಖ್ಯ ಕಾರ್ಯದರ್ಶಿಗಳು ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿಯ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ದಕ್ಷಿಣ ಕನ್ನಡ  ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ಸಿಎಂ ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಹಾರ ಕಾಮಗಾರಿ ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ ಎಂದು ತಿಳಿಸಿದ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಡಿಜಿಪಿ ಅಗ್ನಿ ಶಾಮಕ ದಳ, ಇಬ್ಬರು ಎಡಿಜಿಪಿಗಳು, ಇಬ್ಬರು ಅಪರ ಮುಖ್ಯ ಕಾರ್ಯದರ್ಶಿಗಳು ಸ್ಥಳದಲ್ಲೇ ಮುಕ್ಕಾಂ ಮಾಡಿ ಪರಿಹಾರ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕೊಡಗಿನ ನೆರೆಯ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಜಿಲ್ಲಾ ಮಟ್ಟದ ಅಧಿüಕಾರಿಗಳು ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೊಬೆಷನರಿ ಐಎಎಸ್ ಅಧಿಕಾರಿಗಳನ್ನು ಕೊಡಗಿಗೆ ನಿಯೋಜಿಸಲಾಗಿದೆ ಎಂದರು.

50 ಪರಿಹಾರ ಕೇಂದ್ರಗಳಲ್ಲಿ 6620 ಸಂತ್ರಸ್ತರು
ಕೊಡಗು ಜಿಲ್ಲೆಯಲ್ಲಿ 41 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 09 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 6620 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿದ್ದಾರೆ. ಪರಿಹಾರ ಕೇಂದ್ರಗಳಿಗೆ ಹಾಲು, ಕುಡಿಯುವ ನೀರು ವ್ಯವಸ್ಥೆಯನ್ನು ಮಾಡಲಾಗಿದೆ. ನೆರವಿಗಾಗಿ ಒದಗಿ ಬರುತ್ತಿರುವ ಪರಿಹಾರ ಸಾಮಗ್ರಿಗಳನ್ನು ಮಡಿಕೇರಿಯಲ್ಲಿರುವ ಎಪಿಎಂಸಿ ಯಾರ್ಡ್ನಲ್ಲಿ  ಸಂಗ್ರಹಿಸಿ ಪಂಚಾಯತಿಗಳ ಮೂಲಕ ಜನರಿಗೆ ವಿತರಣೆ ಮಾಡಲಾಗುತ್ತಿದೆ. ಐದು ವಿಶೇಷ ವೈದ್ಯಕೀಯ ತಂಡಗಳು, 10 ರೆವಿನ್ಯೂ ಅಧಿಕಾರಿಗಳ ತಂಡಗಳನ್ನು ಪರಿಹಾರ ಕಾಮಗಾರಿಗಳಿಗಾಗಿ ವಿಶೇಷವಾಗಿ ನಿಯೋಜಿಸಲಾಗಿದೆ. 60 ಜೆಸಿಬಿಗಳು, 20 ಫೋರ್ ವೀಲ್ ಡ್ರೈವ್ನ ಬೊಲೆರೋ ವಾಹನಗಳು ಕಾರ್ಯತತ್ಪರವಾಗಿದೆ. ಕೊಡಗು ಜಿಲ್ಲೆಯಲ್ಲಿ ತಕ್ಷಣವೇ ಮುಂದಿನ ಹತ್ತು ದಿನಗಳೊಳಗೆ ಸಂತ್ರಸ್ತರಿಗೆ ತಾತ್ಕಾಲಿಕ ಅಲ್ಯುಮಿನಿಯಂ ಶೆಡ್ಗಳನ್ನು ನಿರ್ಮಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ವಿವರಿಸಿದರು.

ಸಂತ್ರಸ್ಥರಿಗೆ ತಕ್ಷಣವೇ ವಸತಿ 
ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಪ್ರಥಮ ಆದ್ಯತೆಯಲ್ಲಿ ಸರ್ಕಾರಿ ಭೂಮಿ ಗುರ್ತಿಸುವಂತೆ ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತರಿಗೆ ಅಗತ್ಯವಾದ ಶೆಡ್ಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗುತ್ತಿದೆ. ಕುಶಾಲನಗರದ ಮೂರು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ನೀರನ್ನು ಹೊರಕ್ಕೆ ಪಂಪ್ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತಾಂತ್ರಿಕ ತಂಡ ಕೊಡಗಿಗೆ ತೆರಳಿದೆ. 

ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಕ್ರಮ
ನೆರೆ- ಪ್ರವಾಹದ ಬಳಿಕ ನಮಗೆ ಎದುರಾಗುವ ಪ್ರಮುಖ ಸವಾಲೆಂದರೆ ಸಾರ್ವಜನಿಕ ಆರೋಗ್ಯ. ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆಯ ವಿಶೇಷ ಘಟಕಗಳನ್ನು ರೂಪಿಸಿ ನಿಯೋಜಿಸಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಕೂಲಿ ಕಾರ್ಮಿಕರಿಗೆ ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ ಮುಂತಾದ ಪಟ್ಟಣಗಳಲ್ಲಿ ಬಿದ್ದಿರುವ ತ್ಯಾಜ್ಯವಸ್ತುಗಳ ನಿರ್ಮೂಲನಾ ಕಾಮಗಾರಿಯನ್ನು ವಹಿಸಲು ಸೂಚಿಸಲಾಗಿದೆ.

ಶಾಲಾ ಕಾಲೇಜುಗಳಿಗೆ ಮತ್ತೊಂದು ಸೆಟ್ ಪುಸ್ತಕ ಮತ್ತು ಸಮವಸ್ತ್ರ
ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಈಗಾಗಲೇ ಸರಬರಾಜು ಮಾಡಿರುವ ಪುಸ್ತಕ, ಸಮವಸ್ತ್ರ  ಹಾನಿಗೊಳಗಾಗಿರುವುದರಿಂದ ಮತ್ತೊಂದು ಸೆಟ್ ಪುಸ್ತಕ ಮತ್ತು ಸಮವಸ್ತ್ರಗಳನ್ನು ಸರಬರಾಜು ಮಾಡಲು ಸೂಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಕಳೆದ ಮೂರು ತಿಂಗಳಿನಲ್ಲಿ ಇಪ್ಪತ್ತು ದಿನ  ರಜೆ ಇದ್ದುದಸರಿಂದ, ವಿಶೇಷ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.

ಸುಮಾರು 5800 ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ
ರಿಹಾರ ಕೇಂದ್ರಗಳಲ್ಲಿರುವ ಸುಮಾರು 5800 ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ರೂ.3800/- ನೀಡಲು ಸೂಚಿಸಲಾಗಿದೆ ಹಾಗೂ ಸಂಕಷ್ಟಕ್ಕೊಳಗಾಗಿರುವ 50,000 ಕುಟುಂಬಗಳಿಗೆ ದಿನೋಪಯೋಗಿ ದಿನಸಿ ಸಾಮಾಗ್ರಿಗಳನ್ನು ಪ್ರತಿ ಕುಟುಂಬದ ಮನೆಯ ಬಾಗಿಲಿಗೆ ತಲುಪಿಸಲು 10 ಮೊಬೈಲ್ ದಿನಸಿ ಸಾಮಾಗ್ರಿಗಳ ವಿತರಣಾ ಘಟಕಗಳನ್ನು ಪ್ರಾರಂಬಿಸಲು ಸೂಚಿಸಲಾಗಿದೆ.

 

ರಸ್ತೆ ದುರಸ್ತಿ ಕಾರ್ಯ
ಭಾಗಮಂಡಲ-ನಾಪೊಕ್ಲು- ಅಯ್ಯಂಗೇರಿ ,ಸುಳ್ಯ -ಮಡಿಕೇರಿ ನಡುವಿನ ಸಂಪರ್ಕ ರಸ್ತೆಯಲ್ಲಿ  ಹಲವೆಡೆ ಮಣ್ಣು ಕುಸಿತ ಉಂಟಾಗಿದ್ದು, ಲೋಕೋಪಯೋಗಿ ಇಲಾಖೆ  ರಸ್ತೆ ದುರಸ್ತಿಗೊಳಿಸಲು ಕಾರ್ಯತತ್ಪರವಾಗಿದೆ. 

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಾಗಿರುವ ಅಡೆತಡೆಗಳನ್ನು ಸರಿಪಡಿಸಲು ಕೆಪಿಟಿಸಿಎಲ್/ ಚೆಸ್ಕಾಂ ವಿಶೇಷ ತಂಡವನ್ನು ರವಾನಿಸಿದೆ. ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ, ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ನಷ್ಟದ ಅಂದಾಜು ಪಟ್ಟಿಯನ್ನು ತಯಾರಿಸಲು ಹಾಗೂ ಮನೆಗಳನ್ನು ಕಟ್ಟುವ ಕಾರ್ಯದ ಮೇಲ್ವಿಚಾರಣೆ ಮಾಡಲು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಧನ ಸಹಾಯ ಮಾಡುವವರು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನಿಮ್ಮ ಕೊಡುಗೆ ನೀಡಿ:

ಖಾತೆಯ ವಿವರ
ಖಾತೆಯ ಹೆಸರು: ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ 2018
ಖಾತೆ ಸಂಖ್ಯೆ    : 37887098605
IFSC ಕೋಡ್    : SBIN0040277
ಬ್ಯಾಂಕ್ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಎಂ.ಐ.ಸಿ.ಆರ್. ಸಂಖ್ಯೆ: 560002419

Trending News