ಬೆಂಗಳೂರು: ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಶಕ್ತಿ ವೃದ್ಧಿ ಮಾಡಿಕೊಳ್ಳುವ ಹೋರಾಟದಲ್ಲಿ ರಾಜಕಾರಣಿಗಳ ಮಕ್ಕಳು ಬಲಿಯಾಗುತ್ತಿಲ್ಲ. ಬದಲಿಗೆ ಅಮಾಯಕರ, ಬಡವರ ಮಕ್ಕಳು ಅಮಾನುಷವಾಗಿ ಬಲಿಯಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಕೆ.ಆರ್.ನಗರದಲ್ಲಿ ಡಾ.ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ಪರೋಕ್ಷವಾಗಿ ಬಿಜೆಪಿಯ ಸ್ವಾರ್ಥ ರಾಜಕಾರಣವನ್ನು ಕಟುವಾಗಿ ಟೀಕಿಸಿದರು.
ಬಿಜೆಪಿ ಸರಕಾರದ ಆಡಳಿತಲ್ಲಿ ಕಾರ್ಪೋರೇಟ್ ಕಂಪನಿಗಳು ಲಕ್ಷಾಂತರ ಕೋಟಿ ಕುಳಗಳಾಗುತ್ತಿವೆ. ಒಬ್ಬ ಕಾರ್ಪೋರೇಟ್ ವ್ಯಕ್ತಿಯ ಒಂದು ದಿನದ ಆದಾಯ 1 ಸಾವಿರದ 348 ಕೋಟಿ ರೂಪಾಯಿಗಳಾಗಿದೆ ಎಂದು ಉದ್ಯಮಿ ಗೌತಮ್ ಅದಾಯನಿಯ ಹೆಸರೇಳದೇ ಹೇಳಿದ ಅವರು; ಬಿಜೆಪಿ ಸರಕಾರ ಧನಿಕರ ಪರ ನೀತಿಯನ್ನು ಹೊಂದಿದೆ. ಆದರೆ ದೇಶದಲ್ಲಿ ಕೋಟ್ಯಂತರ ಜನರು ಸ್ವಾತಂತ್ರ್ಯ ಬಂದು ೭೫ ವರ್ಷವಾದ ಹೊತ್ತಿನಲ್ಲೂ ತುತ್ತು ಅನ್ನಕ್ಕೂ ಸಂಕಷ್ಟಪಡುತ್ತಿದ್ದಾರೆ ಎಂದು ಹೆಚ್ಡಿಕೆ ಮರಗಿದರು.
ಇದನ್ನೂ ಓದಿ: Vikrant Rona: ಸುದೀಪ್ ಪತ್ನಿಯಾಗಿ ಅಲ್ಲ, ಅಭಿಮಾನಿಯಾಗಿ ಸಿನಿಮಾ ನೋಡಲು ಬಂದಿರುವೆ..!
ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ನಡೆಸುತ್ತಿರುವ ಸ್ವಾರ್ಥ ರಾಜಕೀಯವನ್ನು ಮಾಜಿ ಮುಖ್ಯಮಂತ್ರಿಗಳು ಎಳೆ ಎಳೆಯಾಗಿ ಬಿಡಿಸಿಟ್ಟರಲ್ಲದೆ; ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಶಕ್ತಿ ವೃದ್ಧಿ ಮಾಡಿಕೊಳ್ಳಲು ಬಗೆಬಗೆಯ ಹೋರಾಟಗಳನ್ನು ರೂಪಿಸುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿ ಕಟ್ಟುತ್ತಾರೆ. ಜಾತಿ ಧರ್ಮಗಳ ನಡುವೆ ಸಂಘರ್ಷ ತರುತ್ತಾರೆ. ಆದರೆ ಈ ಹೋರಾಟದಲ್ಲಿ ರಾಜಕಾರಣಿಗಳ ಮಕ್ಕಳು, ಉಳ್ಳವರ ಮಕ್ಕಳು ಬಲಿಯಾಗುತ್ತಿಲ್ಲ. ಬದಲಿಗೆ ಅಮಾಯಕರ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ಎಂಬ ಯುವಕನ ಹತ್ಯೆಯಾಗಿದ್ದು, ಆತನ ಅಗಲಿಕೆಯಿಂದ ಅವರ ಇಡೀ ಕುಟುಂಬ ಈಗ ಬೀದಿಗೆ ಬಂದಿದೆ ಎಂದು ಕುಮಾರಸ್ವಾಮಿ ನೋವಿನಿಂದ ನುಡಿದರು.
ಸಬ್ಸಿಡಿ ಪಡೆಯಲಿಕ್ಕೂ ಹಣ ಕೊಡಬೇಕು!:
ಈ ಸರಕಾರದಲ್ಲಿ ಹಣ ಕೊಡದಿದ್ದರೆ ಯಾವ ಕೆಲಸವೂ ಆಗುತ್ತಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಸಬ್ಸಿಡಿ ಪಡೆಯಲು 8.5 ಪರ್ಸೆಂಟ್ ಕಮಿಷನ್ ಕೊಡಬೇಕು. ತೋಟಗಾರಿಕೆ ಇಲಾಖೆಯ ಸಬ್ಸಿಡಿಗೆ ಸರಕಾರ 500 ಕೋಟಿ ರೂ. ಮೀಸಲಿಟ್ಟಿದ್ದು, ಕಮಿಷನ್ ಹಣವೇ 45 ಕೋಟಿ ರೂ. ಆಗಲಿದೆ. ಹೀಗೆ ಲೂಟಿ ಮಾಡುವ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಒಂದು ಮತಕ್ಕೆ 2 ಸಾವಿರ ರೂ. ಕೊಟ್ಟು ಮತ ಖರೀದಿ ಮಾಡುತ್ತವೆ. ಇಂಥ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದು ಮತ್ತೆ ಲೂಟಿಗಿಳಿಯುತ್ತಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಇಲ್ಲವೆಂದರೆ ಇನ್ನು ನೂರು ವರ್ಷವಾದರೂ ಕೆಳ ವರ್ಗದವರು ಆರ್ಥಿಕವಾಗಿ, ರಾಜಕೀಯವಾಗಿ ಸಬಲರಾಗಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Siddaramaiah : ಸಿದ್ದರಾಮಯ್ಯ 'ಅಮೃತ ಮಹೋತ್ಸವ' : 50 ಎಕರೆ ಜಾಗದಲ್ಲಿ ಬೃಹತ್ ವೇದಿಕೆ!
ಅರ್ಹರಿಗೆ ಮೀಸಲಾತಿ ದೊರೆಯುತ್ತಿಲ್ಲ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರು ಆರ್ಥಿಕ ಹಾಗೂ ರಾಜಕೀಯವಾಗಿ ಬಲ ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರ ಪ್ರತಿ ವಿಚಾರದಲ್ಲಿ ಹಣ ಲೂಟಿ ಮಾಡುವುದನ್ನೇ ನೋಡುತ್ತಿದೆಯೇ ಹೊರತು, ಜನ ಪರ ಕಾಳಜಿ ನೋಡುತ್ತಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಆರೋಪಿಸಿದರು.
ಕೆ.ಆರ್.ನಗರ ಪಟ್ಟಣದ ಹಾಸನ-ಮೈಸೂರು ಮುಖ್ಯರಸ್ತೆಯ ತೋಪಮ್ಮ ದೇವಸ್ಥಾನದ ಬಳಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಅಡಿಗಲ್ಲು ಹಾಕಿದರು. ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.