ಬೆಂಗಳೂರು: ಭಾರತ ದೇಶ ಒಗ್ಗಟ್ಟಿನಿಂದ ಬಲಿಷ್ಟವಾಗಿ ಬೆಳೆಯುತ್ತಿರುವಾಗ ಕಾಂಗ್ರೆಸ್ನ ‘ಭಾರತ್ ಜೋಡೋ ಯಾತ್ರೆ’ಗೆ ಯಾವುದೇ ಅರ್ಥವಿಲ್ಲವೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟೀಕಿಸಿದ್ದಾರೆ. ಶನಿವಾರ 61ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
‘ಭಾರತ ಜೋಡೋ ಯಾತ್ರೆ’ಯ ಅರ್ಥ ಏನು? ಭಾರತ ಈಗಾಗಲೇ ಒಕ್ಕೂಟವಾಗಿ, ಒಗ್ಗಟ್ಟಾಗಿ ಮುನ್ನಡೆಯುತ್ತಿದೆ. ಇದನ್ನು ಮತ್ತೆ ಜೋಡಿಸುವ ಪ್ರಮೇಯವೇ ಇಲ್ಲ. ಇಡೀ ದೇಶವೇ ಒಗ್ಗಟ್ಟಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆ ಸಾಧಿಸುತ್ತಿದೆ. ಪ್ರಸ್ತುತ ಇಡೀ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ. ಅಮೆರಿಕ ಸೇರಿದಂತೆ G7 ದೇಶಗಳು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಭಾರತ ದೇಶ ಕನಿಷ್ಟ ಶೇ.7ರಷ್ಟು ಅಭಿವೃದ್ಧಿ ಕಾಯ್ದುಕೊಂಡು ಬಂದಿದೆ. ರಾಹುಲ್ ಗಾಂಧಿಯವರ ಮೊದಲ ಮಿಸೈಲ್ ವಿಫಲಗೊಂಡಿದ್ದು, ಈಗ ಮತ್ತೊಮ್ಮೆ ಲಾಂಚ್ ಮಾಡುವ ಪ್ರಯತ್ನದಲ್ಲಿದ್ದಾರೆ. ಅದು ಬಿಟ್ಟರೆ ಇವರ ಜೋಡೋ ಯಾತ್ರೆಗೆ ಯಾವುದೇ ಅರ್ಥವಿಲ್ಲವೆಂದು ಕುಟುಕಿದರು.
ಇದನ್ನೂ ಓದಿ: "ಹಿಜಾಬ್ ಪ್ರಕರಣ ವಿಚಾರದಲ್ಲಿ ಸುಪ್ರೀಂಕೋರ್ಟ್ ನ ಅಂತಿಮ ತೀರ್ಪು ಬಹಳ ಮುಖ್ಯ"
ಕಾಂಗ್ರೆಸ್ ಬಳ್ಳಾರಿಯ ಜನಕ್ಕೆ ಮೋಸ ಮಾಡಿದಂತಲ್ಲವೇ?
ಬಳ್ಳಾರಿಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಸಮಾವೇಶಕ್ಕೆ ಯಾವ ಪ್ರಶ್ನೆ ಕೇಳಲು ಬಯಸುತ್ತೀರಿ ಎಂಬುದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಬಳ್ಳಾರಿಯಲ್ಲಿ ಲೋಕಸಭಾ ಚುನಾವಣೆಗೆ ನಿಂತು, ಈ ಕ್ಷೇತ್ರವನ್ನೇ ಆಯ್ಕೆ ಮಾಡುವುದಾಗಿ ನಿರ್ಣಯಿಸಿ, ನಂತರ ರಾಯಬರೇಲಿ ಎಂದು ಆಯ್ಕೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಮತ ಹಾಕಿದ ಜನರಿಗೆ ಕೃತಜ್ಞತೆಯನ್ನೂ ಸಲ್ಲಿಸಲಿಲ್ಲ. ಅಂದು 3 ಸಾವಿರ ಕೋಟಿ ರೂ. ಬಜೆಟ್ ನಿಗದಿಪಡಿಸಿ 1 ಪೈಸೆಯನ್ನೂ ಬಿಡುಗಡೆ ಮಾಡಲಿಲ್ಲ. ಈಗ ಯಾವ ಮುಖ ಇಟ್ಟುಕೊಂಡು ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದೀರಿ? ಅಲ್ಲಿನ ಜನಕ್ಕೆ ನೀವು ಮೋಸ ಮಾಡಿದಂತಲ್ಲವೇ ಎಂದು ಪ್ರಶ್ನಿಸಿದರು.
2023ರಲ್ಲಿ 150 ಗುರಿ ಮುಟ್ಟುವ ವಿಶ್ವಾಸವಿದೆ
ಬಿಜೆಪಿ ಸಂಕಲ್ಪ ಯಾತ್ರೆಯನ್ನು 3 ದಿನಗಳ ಕಾಲ 4 ಜಿಲ್ಲೆಯಲ್ಲಿ ಪ್ರಾರಂಭ ಮಾಡಿದ್ದು, ಅಭೂತಪೂರ್ವ ಬೆಂಬಲ ದೊರೆತಿದೆ. ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಿದೆ. ಬಿಜೆಪಿ ಬಗ್ಗೆ ಜನರಲ್ಲಿಯೂ ವಿಶ್ವಾಸ ಹೆಚ್ಚಿದೆ. ಸಂಕಲ್ಪಯಾತ್ರೆ ವಿಜಯಸಂಕಲ್ಪ ಯಾತ್ರೆ ಆಗುವುದರಲ್ಲಿ ಸಂಶಯವಿಲ್ಲ. 2023ರಲ್ಲಿ ನಾವು 150ರ ಗುರಿಯನ್ನು ಮುಟ್ಟುವ ವಿಶ್ವಾಸವಿದೆ ಎಂದು ಸಿಎಂ ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯನವರು 4 ಕಿ.ಮೀ. ನಡೆಯುವ ಸವಾಲಿಗೆ ಪ್ರತಿಕ್ರಿಯಿಸಿದ ಸಿಎಂ, ‘ಅವರು ನನ್ನ ಬಗ್ಗೆ ವೈಯಕ್ತಿಕವಾಗಿ ಟೀಕಿಸಿದ್ದಾರೆ. ಇದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ದೇವರು ಒಳ್ಳೆಯ ಆರೋಗ್ಯವನ್ನು ನೀಡಿ ನೂರು ವರ್ಷ ಚೆನ್ನಾಗಿಟ್ಟಿರಲಿ’ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ನವರದ್ದು 85 % ಸರ್ಕಾರ. : ಸಿಎಂ ಬೊಮ್ಮಾಯಿ
ಕಾನೂನಿನ ಚೌಕಟ್ಟಿನೊಳಗೆ ಕ್ರಮ
ಮುರುಘಾಮಠಕ್ಕೆ ಹೊಸ ಶ್ರೀಗಳನ್ನು ನೇಮಿಸುವ ಬಗ್ಗೆ ಒತ್ತಡ ಕೇಳಿಬರುತ್ತಿರುವುದಕ್ಕೆ ಪ್ರತಿಕ್ರಯಿಸಿದ ಸಿಎಂ, ‘ಮಾಜಿ ಸಚಿವ ಏಕಾಂತಯ್ಯ ಅವರ ನೇತೃತ್ವದಲ್ಲಿ ಭಕ್ತಮಂಡಳಿಯ ಸರ್ವರೂ ಬಂದು ಭೇಟಿಯಾಗಿದ್ದಾರೆ. ಅಲ್ಲಿನ ವಿಚಾರಗಳೆಲ್ಲವನ್ನೂ ತಿಳಿಸಿದ್ದಾರೆ. ಮಠದ ಆಡಳಿತಕ್ಕೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದ್ದಾರೆ. ಮಠದ ಟ್ರಸ್ಟ್ ಇದ್ದು, ಕಾನೂನಿನ ಚೌಕಟ್ಟಿನೊಳಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.
ಟ್ರ್ಯಾಕ್ ಹಾಳಾಗದಂತೆ ಕ್ರಮವಹಿಸಲು ತಾಕೀತು
ಕಂಠೀರವ ಸ್ಟೇಡಿಯಂನ್ನು ಫುಟ್ಬಾಲ್ ಕ್ರೀಡೆಗೆ ನೀಡುತ್ತಿದ್ದು, ರಾಜ್ಯದ ಕ್ರೀಡಾಪಟುಗಳಿಗೆ ಇದರಿಂದ ತೊಂದರೆಯಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ‘ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಸ್ಟೇಡಿಯಂ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ವಿಚಾರ ಅವರ ಅಧಿಕಾರದ ಮಿತಿಗೆ ಒಳಪಟ್ಟಿದ್ದು, ನಾವು ನಿರ್ಧರಿಸಲು ಆಗುವುದಿಲ್ಲ.ಆದರೆ ಕ್ರೀಡಾಂಗಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಟ್ರ್ಯಾಕ್ ಹಾಳಾಗದಂತೆ ಕಾಪಾಡುವುದು ಅಸೋಸಿಯೇಷನ್ ನವರ ಜವಾಬ್ದಾರಿ. ಇದಕ್ಕೆ ಸಂಬಂಧಪಟ್ಟವರನ್ನು ಕರೆಸಿ ಈ ಬಗ್ಗೆ ತಾಕೀತು ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.