ಬಿಜೆಪಿ ಸರ್ವಾಧಿಕಾರ, ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಇಡಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್‌ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

Written by - Prashobh Devanahalli | Edited by - Chetana Devarmani | Last Updated : Jul 21, 2022, 04:15 PM IST
  • ಸಿಬಿಐ, ಇಡಿ, ಐಟಿ ಗಳನ್ನು ದುರುಪಯೋಗ
  • ಅಸಮಾನತೆ ಮೂಲಕ ಶೋಷಣೆ ಮಾಡುವ ಚಿಂತನೆ ಬಿಜೆಪಿಯದು
  • ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಬಿಜೆಪಿ ಸರ್ವಾಧಿಕಾರ,  ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ title=
ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಇಡಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್‌ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಕಳೆದ ತಿಂಗಳು ರಾಹುಲ್‌ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಕರೆದಾಗ ಇಡಿ ಕಚೇರಿ ವರೆಗೆ ಪ್ರತಿಭಟನೆ ಇಟ್ಟುಕೊಂಡು, ಅದಕ್ಕೆ ಮುತ್ತಿಗೆ ಹಾಕುವ ಕೆಲಸವನ್ನು ಮಾಡಿದ್ದೆವು. ಈಗ ಮತ್ತೆ ಸೋನಿಯಾ ಗಾಂಧಿ ಅವರನ್ನು ಇಡಿ ಕರೆಸಿಕೊಂಡು ವಿಚಾರಣೆ ಮಾಡುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ವಿಚಾರಣೆಗೆ ಕರೆದರೆ ಕಾಂಗ್ರೆಸ್‌ ಯಾಕೆ ಹೆದರಿಕೊಳ್ಳಬೇಕು. ಭಾರತೀಯ ಜನತಾ ಪಕ್ಷದವರು ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ದೆಹಲಿ-ಪಂಜಾಬ್ ನಂತರ ಈ ರಾಜ್ಯದವರಿಗೆ ಸಿಗಲಿದೆ ಫ್ರೀ ವಿದ್ಯುತ್

ಸಿಬಿಐ, ಇಡಿ, ಐಟಿ ಗಳನ್ನು ದುರುಪಯೋಗ : 

ನಾವ್ಯಾರು ದೇಶದ ಕಾನೂನಿಗಿಂತ ದೊಡ್ಡವರಲ್ಲ. ಆದರೆ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಸ್ವಾಯತ್ತ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿ ಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್‌ ಪಕ್ಷದ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಇರುವುದು ಎರಡೇ ರಾಷ್ಟ್ರೀಯ ಪಕ್ಷಗಳು. ಕಮ್ಯುನಿಷ್ಟ್‌ ಪಕ್ಷ ರಾಷ್ಟ್ರೀಯ ಪಕ್ಷವಾದರೂ ತಮ್ಮನ್ನು ಚುನಾವಣೆಯಲ್ಲಿ ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್‌ ಗೆ ಮಾತ್ರ ಎಂಬುದು ಬಿಜೆಪಿ ಅವರಿಗೆ ಗೊತ್ತಾಗಿದೆ. ಅದಕ್ಕೋಸ್ಕರವಾಗಿ ಕಾಂಗ್ರೆಸ್‌ ಪಕ್ಷವನ್ನು ನಿರ್ನಾಮ ಮಾಡಬೇಕು ಎಂದು ಹೊರಟಿದ್ದಾರೆ. ಮೋದಿ, ಅಮಿತ್‌ ಶಾ ಅವರೇ ಭಾರತವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಹಲವು ಬಾರಿ ಹೇಳಿದ್ದಾರೆ. ಇಡಿ ತನಿಖೆ ಮೂಲಕ ನಮ್ಮ ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಷಡ್ಯಂತ್ರ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಅಕ್ರಮ ಹಣದ ವರ್ಗಾವಣೆ ಎಲ್ಲಿ ಆಗಿದೆ? 

ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಇಡಿ ಅವರು ತನಿಖೆ ಮಾಡುವಂತಹ ಯಾವುದೇ ಪ್ರಕರಣ ಇಲ್ಲ. ಅಕ್ರಮ ಹಣದ ವರ್ಗಾವಣೆ ಎಲ್ಲಿ ಆಗಿದೆ? ಎಲ್ಲಿ ಕ್ರಿಮಿನಲ್‌ ಚಟುವಟಿಕೆ ನಡೆದಿದೆ? ಇಲ್ಲಿ ಎಫ್.ಐ.ಆರ್‌ ಕೂಡ ದಾಖಲಾಗಿಲ್ಲ. ಎಫ್.ಐ.ಆರ್‌ ಆಗದೆ ಯಾವುದೇ ತನಿಖಾ ಸಂಸ್ಥೆ ವಾರಂಟ್‌ ಕೊಡುವಂತಿಲ್ಲ. ಕಾನೂನು ತಿಳಿದ ಎಲ್ಲರಿಗೂ ಇದು ಗೊತ್ತಿರುವ ವಿಚಾರ. ನಾಡಿನ ವಕೀಲರು ಸರ್ಕಾರದ ಈ ಸುಳ್ಳು ಕೇಸ್‌ ಅನ್ನು ತಿಳಿಸಿ ಹೇಳುವ ಮೂಲಕ ಸರ್ಕಾರದ ಈ ದುರುದ್ದೇಶವನ್ನು ಬಯಲು ಮಾಡುವ ಕೆಲಸ ಮಾಡಬೇಕು ಎಂದು ವಕೀಲ ಬಂಧುಗಳಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ. 

ಇದನ್ನೂ ಓದಿ: Soniya Gandhi : 'ನಾನು ಇಂದಿರಾಯವರ ಸೊಸೆ, ನಾನು ಯಾರಿಗೂ ಹೆದರುವುದಿಲ್ಲ'

ಅಸಮಾನತೆ ಮೂಲಕ ಶೋಷಣೆ ಮಾಡುವ ಚಿಂತನೆ ಬಿಜೆಪಿಯದು : 

ಕಿರುಕುಳ ನೀಡುವ ಉದ್ದೇಶದಿಂದ ವಿಚಾರಣೆ ಮಾಡುತ್ತಿರುವ ಕಾರಣಕ್ಕೆ ನಾವು ಪ್ರತಿಭಟಿಸುತ್ತಿದ್ದೇವೆ. ನಾವು ಈ ದೇಶದ ಕಾನೂನಿಗೆ ವಿರುದ್ಧವಾಗಿಲ್ಲ. ಕಾಂಗ್ರೆಸ್‌ ಪಕ್ಷ ಮಾತ್ರ ದೇಶದ ಸಂವಿಧಾನದ ಬಗ್ಗೆ ಗೌರವ ಇಟ್ಟಿರುವುದು. ಬಿಜೆಪಿ ಸರ್ವಾಧಿಕಾರ ಮತ್ತು ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟವರು. ಇದಕ್ಕಾಗಿಯೇ ಆರ್.ಎಸ್.ಎಸ್‌ ನಾಯಕರು ಹಿಟ್ಲರ್‌ ಅನ್ನು ಹಾಡಿ ಹೊಗಳಿದ್ದನ್ನು ಚರಿತ್ರೆಯಲ್ಲಿ ನಾವು ಕಾಣಬಹುದು. ಇವರು ಒಬ್ಬ ನಾಯಕ, ಒಂದು ಸಿದ್ಧಾಂತ ಮತ್ತು ಒಂದು ಚಿಹ್ನೆಯಲ್ಲಿ ನಂಬಿಕೆಯಿಟ್ಟವರು. ಅಸಮಾನತೆ ಮೂಲಕ ಶೋಷಣೆ ಮಾಡುವ ಚಿಂತನೆ ಬಿಜೆಪಿಯದು. ಪ್ರಜಾಪ್ರಭುತ್ವ ಮತ್ತು ಸಮಾನತೆ ಇರುವ ಕಡೆ ಬಡವರು, ದಲಿತರು, ಅಲ್ಪಸಂಖ್ಯಾತರನ್ನು ಶೋಷಣೆ ಮಾಡಲು ಸಾಧ್ಯವಿಲ್ಲ, ಇದಕ್ಕಾಗಿಯೇ ಬಿಜೆಪಿಯವರು ಸಂವಿಧಾನವನ್ನು ವಿರೋಧಿಸುವುದು ಎಂದು ವಾಗ್ದಾಳಿ ನಡೆಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News