ಬೆಂಗಳೂರು: ಸೋಮವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 2 ವಿಡಿಯೋ ಹಾಗೂ ಒಂದು ಫೋಟೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಭ್ರಷ್ಟಾಚಾರ ನಡೆಸಿದ್ದಾರೆ. ಆಡಿಯೋ ವೈರಲ್ ಆದ ಬಳಿಕ ಹಣ ನೀಡಿ ಹೇಳಿಕೆಯನ್ನು ಬೇರೆ ರೀತಿ ಹೇಳಿಸಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಗಂಭೀರ ಆರೋಪ ಮಾಡಿದರು.
ವಿಡಿಯೋ 1: ಪರಸಪ್ಪ ಮೇಗೂರು ಅವರು ಒಂದು ವಿಡಿಯೋದಲ್ಲಿ ನನ್ನ ಮಗ ಪಿಎಸ್ಐ ಆಗಲು ಬಯಸಿದಾಗ ಶಾಸಕರ ಆಪ್ತರು ಬಂದು ನಾವು ನಿಮ್ಮ ಕೆಲಸ ಮಾಡುತ್ತೇವೆ ಎಂದು ಕಾರಟಗಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಒಂದು ಮೊತ್ತಕ್ಕೆ ಡೀಲ್ ಮಾಡಿ, 2020ರ ಆಗಸ್ಟ್‍ನಲ್ಲಿ ಬಸವರಾಜ್ ದಡೇಸುಗೂರು ಶಾಸಕರ ಭವನಕ್ಕೆ ಕರೆಸಿಕೊಂಡರು. ಅಲ್ಲಿ ಸಿಬ್ಬಂದಿ ಹೆಚ್ಚಾಗಿರುವ ಕಾರಣ ಶಾಸಕರ ಕಾರಿನಲ್ಲೇ ಕರೆದುಕೊಂಡು ಹೋಗುತ್ತಾರೆ. ವ್ಯವಹಾರ ಮಾಡಿ 30 ಲಕ್ಷ ರೂ. ಡೀಲ್‍ಗೆ ನಿರ್ಧರಿಸುತ್ತಾರೆ ಎಂದು ಪರಸಪ್ಪ ಅವರೇ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ.
ವಿಡಿಯೋ 2: ಮೊದಲ ವಿಡಿಯೋದಲ್ಲಿ ಪಿಎಸ್ಐ ನೇಮಕಾತಿಗೆ 30 ಲಕ್ಷ ರೂ. ಹಣಕ್ಕೆ ಶಾಸಕ ದಡೇಸುಗೂರು ಕೇಳಿದ್ದನ್ನು ಒಪ್ಪಿದ್ದ ಪರಸಪ್ಪ, 2ನೇ ವಿಡಿಯೋದಲ್ಲಿ ಅಲ್ಲಗೆಳೆದಿದ್ದಾರೆ. ಯಾವುದೇ ರೀತಿ ಹಣದ ವ್ಯವಹಾರ ಆಗಿಲ್ಲವೆಂದು ಹೇಳುವ ಮೂಲಕ ಗೊಂದಲ ಹಾಗೂ ಅನುಮಾನ ಸೃಷ್ಟಿ ಮಾಡಿದ್ದಾರೆ.
ಇದನ್ನೂ ಓದಿ: Rohini Sindhuri : 'ರೋಹಿಣಿ ಸಿಂಧೂರಿ ವಿರುದ್ಧ 1 ಕೋಟಿ ಮಾನನಷ್ಟ ಮೊಕದ್ದಮೆ'
ಫೋಟೋ: ವಿಡಿಯೋ 2ರಲ್ಲಿ ಇದ್ದ ಬಟ್ಟೆಯನ್ನು ಧರಿಸಿದ್ದ ಪರಸಪ್ಪ ಅದೇ ಬಟ್ಟೆಯಲ್ಲಿ ಫೋಟೋದಲ್ಲಿಯೂ ಕಾಣಿಸದ್ದಾರೆ. ಪಕ್ಕದಲ್ಲಿ ಪರಸಪ್ಪ ಅವರ ಪರಿಚಯ ವ್ಯಕ್ತಿಯೊಬ್ಬರು ಹಳದಿ ಬ್ಯಾಗ್ ಹಿಡಿದಿದ್ದಾರೆ. ಹಣ ನೀಡಿ ಪರಸಪ್ಪ ಅವರ ಮಾತು ಬದಲಿಸಿದ್ದಾರೆ ಎಂದು ಮಾಜಿ ಸಚಿವ ಮತ್ತು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಂಗಡಗಿ ಆರೋಪಿಸಿದ್ದಾರೆ.
ಈ ಡೀಲ್ ನಿಗದಿಯಾದ ನಂತರ ಮುಂಗಡವಾಗಿ 15 ಲಕ್ಷ ರೂ. ನೀಡುತ್ತಾರೆ. ನಾವು ಯಾವಾಗಲೂ ಹೇಳುವಂತೆ ವಿಧಾನಸೌಧ ವ್ಯಾಪಾರಸೌಧವಾಗಿದೆ. ಶಾಸಕರ ಭವನದಲ್ಲಿ ಡೀಲ್ ಮಾಡಿದ್ದಾರೆ ಎಂದರೆ ಇವರಿಗೆ ನಾಚಿಕೆ ಆಗುವುದಿಲ್ಲವೇ? ಕೆಲಸ ಆಗದ ನಂತರ ಹಣ ಕೇಳಿದಾಗ ನಾನು ಹಣವನ್ನು ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳುತ್ತಾರೆ. ಈ ಸರ್ಕಾರ ಎಂದರೆ ವಿಧಾನಸೌಧ ಅಲ್ಲವೇ? ಎಂದು ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ಶಾಸಕರು ಹಣ ವಾಪಸ್ ಮಾಡದ ಹಿನ್ನೆಲೆ ಈ ಪ್ರಕರಣ ಬಹಿರಂಗವಾಗಿದೆ. ಬಿಜೆಪಿ ಶಾಸಕರು ಮತ್ತು ಸಚಿವರು ಬ್ರೋಕರ್‍ಗಳಾಗಿದ್ದಾರೆ. ಬಿಜೆಪಿ ಭ್ರಷ್ಟ ಜನತಾ ಪಕ್ಷವಾಗಿತ್ತು, ಈಗ ಶಾಸಕರ ಬ್ರೋಕರ್ ಜನತಾ ಪಕ್ಷವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಪ್ರಕರಣದಲ್ಲಿ ಇಷ್ಟೆಲ್ಲಾ ಆದರೂ ಶಾಸಕರಿಗೆ ನೋಟೀಸ್ ಹೋಗಿಲ್ಲ, ಸುಮೋಟೋ ಪ್ರಕರಣ ದಾಖಲಾಗಿಲ್ಲ. ಮುಖ್ಯಮಂತ್ರಿಗಳು ಶಾಸಕರನ್ನು ಕರೆದು ಪ್ರಶ್ನೆ ಮಾಡಿಲ್ಲ ಯಾಕೆ? ಆಗ ಗೃಹಮಂತ್ರಿಯಾಗಿದ್ದವರು ಬಸವರಾಜ್ ಬೊಮ್ಮಾಯಿಯವರೇ ಅಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: CT Ravi : 'ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು'
ಬೊಮ್ಮಾಯಿಯವರು ದೊಡ್ಡಬಳ್ಳಾಪುರದಲ್ಲಿ ಧೈರ್ಯ, ತಾಕತ್ತು, ಧಮ್ಮಿನ ವಿಚಾರವಾಗಿ ಮಾತನಾಡಿದ್ದಾರೆ. ನಿಮಗೆ ಧಮ್ಮಿದ್ದರೆ ಶಾಸಕರನ್ನು ಕರೆಸಿ, ಪರೀಕ್ಷೆ ಬರೆದ ಯುವಕರು, ನಿರುದ್ಯೋಗಿಗಳ ಮುಂದೆ ಈ ವಿಚಾರ ಪ್ರಸ್ತಾಪಿಸಿ. ಶಾಸಕರು ಯಾಕೆ 15 ಲಕ್ಷ ಪಡೆದರು? ಸರ್ಕಾರಿ ಹುದ್ದೆಗಳನ್ನು ಯಾಕೆ ಮಾರಾಟ ಮಾಡಿದ್ದಾರೆ ಎಂದು ಯುವಕರ ಮುಂದೆ ಹೇಳಿ. ನಿಮ್ಮ ಯೋಗ್ಯತೆಗೆ ಒಬ್ಬರಿಗೆ ಕೆಲಸ ನೀಡಲು ಆಗಿಲ್ಲ, ನೀವು ಧಮ್ಮು-ತಾಕತ್ತು ಬಗ್ಗೆ ಮಾತನಾಡುತ್ತೀರಾ? ಅಂತಾ ಆಕ್ರೋಶ ಹೊರಹಾಕಿದ್ದಾರೆ.
ಶಾಸಕ ಬಸವರಾಜ್ ದಡೇಸುಗೂರು ಈಗ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲವೆಂದು ಹೇಳುತ್ತಿದ್ದು, ಆರಂಭದಲ್ಲಿ ಇದು ನಂದೇ ಧ್ವನಿ ಎಂದು ಒಪ್ಪಿಕೊಂಡಿದ್ದು ಯಾಕೆ? ನಂತರ ಆಡಿಯೋದಲ್ಲಿ ನೀವು ಹಣ ಯಾರಿಗೆ ಕೊಟ್ಟಿದ್ದೀರಿ ಎಂದು ಕೇಳಿದಾಗ ಅದನ್ನೆಲ್ಲ ಹೇಳಲು ಸಾಧ್ಯವೇ ಎಂದು ಉತ್ತರಿಸಿದ್ದರು. ಆಗಲೇ ಈ ಆಡಿಯೋ-ವಿಡಿಯೋ ನಕಲಿ ಎನ್ನಬುದಾಗಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತಾನಾಡಿದ ಶಿವರಾಜ್ ತಂಗಡಗಿ, ಪರಸಪ್ಪನವರು ಬಿಜೆಪಿ ಜಿಲ್ಲಾಧ್ಯಕ್ಷರಾದ ದೊಡ್ಡನಗೌಡರಿಗೆ ದೂರು ನೀಡಿದರು. ನಂತರ ಅಧ್ಯಕ್ಷರು ಈ ವಿಚಾರವಾಗಿ ಪಕ್ಷ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದರು. ಇಷ್ಟಾದರೂ ಇಲ್ಲಿಯವರೆಗೂ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಗೃಹ ಸಚಿವರು ಮಾತನಾಡುತ್ತಿಲ್ಲ. ಇದು ಅಕ್ರಮದಲ್ಲಿ ಸರ್ಕಾರದ ಭಾಗಿಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ʼಜನಸ್ಪಂದನೆʼಗೆ ಹೆದರಿ ಬುಡಕ್ಕೆ ಬೆಂಕಿ ಬಿದ್ದವರಂತೆ ಒದ್ದಾಡುತ್ತಿದ್ದಾರೆ : ಬಿಜೆಪಿ
ನಂತರ ಪರಸಪ್ಪ ಮಾಧ್ಯಮಗೋಷ್ಠಿ ಮಾಡಿ ಈ ಆಡಿಯೋದಲ್ಲಿ ಮಾತನಾಡಿರುವುದು ನಾನಲ್ಲ. ನನ್ನ ಮಗ ದೈಹಿಕ ಪರೀಕ್ಷೆ ಪಾಸಾಗಿಲ್ಲವೆಂದು ಹೇಳಿದರು. ಈಗ ಶಾಸಕ ದಡೇಸುಗೂರು ವಿಧಾನಸಭೆ ಮುಂದೆ ಮಾತನಾಡಿ ವಿಡಿಯೋಗಳನ್ನು ಕಟ್ ಪೇಸ್ಟ್ ಮಾಡಿ ತೋರಿಸುತ್ತಿದ್ದಾರೆಂದು ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಪರಸಪ್ಪ ಅವರೇ ಖುದ್ದಾಗಿ ಮಾತನಾಡಿದ್ದಾರೆ. ಈ ಹಿಂದೆ ಮಹಿಳೆ ವಿಚಾರವಾಗಿ ಆಡಿಯೋ-ವಿಡಿಯೋ ಮಾಧ್ಯಮಗಳಲ್ಲಿ ಬಂದಿತ್ತು. ಆಗ ಮಾಧ್ಯಮಗಳು ನನ್ನ ಪ್ರತಿಕ್ರಿಯೆ ಕೇಳಿದಾಗ ನಾನು ಜಿಲ್ಲಾಧ್ಯಕ್ಷನಾಗಿ ಅದರ ಬಗ್ಗೆ ಮಾತನಾಡುವುದಿಲ್ಲವೆಂದು ಹೇಳಿದ್ದೆ. ಕಾರಣ ಯಾರು ಅನ್ಯಾಯಕ್ಕೆ ಒಳಗಾಗಿದ್ದಾರೋ ಅವರು ನನ್ನ ಬಳಿ ಬಂದು ಮಾತನಾಡಿದರೆ ಅವರಿಗೆ ನ್ಯಾಯ ಕೊಡಿಸಲು ಹೋರಾಡುತ್ತೇನೆಂದು ಹೇಳಿದ್ದೆ. ಆದರೆ ಈ ವಿಡಿಯೋ ಬಗ್ಗೆ ನಾನು ಸುಮ್ಮನಿರಲು ಆಗುವುದಿಲ್ಲವೆಂದು ತಂಗಡಗಿ ಹೇಳಿದ್ದಾರೆ.
ನನ್ನ ಕನಕಗಿರಿ ಕ್ಷೇತ್ರದಲ್ಲಿ 15 ಮಂದಿ ಯುವಕರು ನೇಮಕಾತಿಗಾಗಿ ಹಣ ನೀಡಿದ್ದಾರೆಂಬ ಚರ್ಚೆಯಾಗುತ್ತಿದೆ. ಅವರು ಬಡವರಾಗಿದ್ದು, ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಲು ಹೆದರುತ್ತಿದ್ದಾರೆ. ಹೀಗಾಗಿ ಇದು ಪೂರ್ಣ ಪ್ರಮಾಣದ ತನಿಖೆ ಆಗಬೇಕು. ರಾಜ್ಯದಲ್ಲಿ ನೂರಾರು ಮಂದಿ ಈ ವಿಚಾರವವನ್ನು ಧೈರ್ಯವಾಗಿ ಹೇಳಲು ಆಗುತ್ತಿಲ್ಲ. ಬಿಜೆಪಿಯವರು ತಮ್ಮ 40% ಕಮಿಷನ್ ಮುರಿದುಕೊಂಡು ಉಳಿದ ಮತ್ತವನ್ನಾದರೂ ನೀಡಿ ಎಂದು ಮನವಿ ಮಾಡುತ್ತೇನೆ ಅಂತಾ ತಂಗಡಗಿ ಇದೇ ವೇಳೆ ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.