ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ರಾಜಕೀಯ ನಾಯಕತ್ವವೇ ಇಲ್ಲದಂತಾಗಿದೆ: ದಿನೇಶ್ ಗುಂಡೂರಾವ್

ಬೆಳಗಾವಿ ಭಾಗದಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ನೇತೃತ್ವದ ತಂಡ ಮಳೆ ಹಾನಿ ಪರಿಶೀಲನೆ ನಡೆಸುತ್ತಿದ್ದು, ರಾಯಚೂರು ಭಾಗದಲ್ಲಿ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. 

Updated: Aug 6, 2019 , 10:27 PM IST
ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ರಾಜಕೀಯ ನಾಯಕತ್ವವೇ ಇಲ್ಲದಂತಾಗಿದೆ: ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಂಟಾಗಿರುವ ನೆರೆ ಪರಿಸ್ಥಿತಿಯ ಅಧ್ಯಯನಕ್ಕೆ ಕಾಂಗ್ರೆಸ್ ಎರಡು ಸಮಿತಿಗಳನ್ನು ರಚಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಳಗಾವಿ ಭಾಗದಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ನೇತೃತ್ವದ ತಂಡ ಮಳೆ ಹಾನಿ ಪರಿಶೀಲನೆ ನಡೆಸುತ್ತಿದ್ದು, ರಾಯಚೂರು ಭಾಗದಲ್ಲಿ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಬಳಿಕ ಈ ಎರಡೂ ಸಮಿತಿಗಳು ನೆರೆ ಅಧ್ಯಯನದ ವರದಿಯನ್ನು ನೀಡಲಿವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

ಇದೇ ವೇಳೆ, ಪ್ರವಾಹದಿಂದ ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದ ಜನತೆ ಭಾರೀ ತೊಂದರೆ ಅನುಭವಿಸಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ದೆಹಲಿಗೆ ತೆರಳಿರುವ ಸಿಎಂ ಯಡಿಯೂರಪ್ಪ ಅವರು, ಪ್ರವಾಹ ಪರಿಹಾರಕ್ಕಾಗಿ ಹೆಚ್ಚಿನ ಅನುದಾನ ತರಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿರುವುದರಿಂದ ಯಾವುದೇ ಮಲತಾಯಿ ಧೋರಣೆ ಅನುಸರಿಸದೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ತುರ್ತು ಪರಿಸ್ಥಿತಿಯಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ರಾಜ್ಯದಲ್ಲಿ ಇನ್ನು ಮಂತ್ರಿಮಂಡಲವೇ ರಚನೆಯಾಗಿಲ್ಲ. ಮುಖ್ಯಮಂತ್ರಿಗಳು ಒಬ್ಬರೇ ಇದ್ದು, ಆಡಳಿತದ ಚುಕ್ಕಾಣಿ ಹಿಡಿಯುವ ರಾಜಕೀಯ ನಾಯಕತ್ವವೇ ಇಲ್ಲದಂತಾಗಿದೆ. ಅಧಿಕಾರಿಗಳನ್ನಷ್ಟೇ ನಂಬಿಕೊಂಡು ಕುಳಿತರೆ ಆಗುವುದಿಲ್ಲ. ಕೂಡಲೇ ಸಚಿವ ಸಂಪುಟ ರಚಿಸಿ, ಪ್ರವಾಹ ಸ್ಥಳಗಳಲ್ಲಿ ಪರಿಹಾರ ಕಾರ್ಯಗಳನ್ನು ಮತ್ತಷ್ಟು ತೀವ್ರಗೊಳಿಸಬೇಕು ಎಂದು ದಿನೇಶ್ ಗುಂಡೂರಾವ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.