ಕಾಂಗ್ರೆಸ್ ಅಕ್ರಮ ನಡೆಸಿ ಚುನಾವಣೆ ಗೆದ್ದಿದೆ:  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ

ಸುಳ್ಳು ಗ್ಯಾರಂಟಿಗಳ ಜತೆಗೆ ಅಕ್ರಮವಾಗಿ ಕೂಪನ್ ಗಳನ್ನು ಹಂಚಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದಲ್ಲಿ 45ರಿಂದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

Written by - Zee Kannada News Desk | Last Updated : May 26, 2023, 08:10 PM IST
  • ದಾಖಲೆ ಸಮೇತ ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿಗಳು
  • ಮಿಸ್ಟರ್ ಸಿದ್ದರಾಮಯ್ಯ ಧೈರ್ಯವಿದ್ದರೆ ತನಿಖೆ ನಡೆಸಿ
  • ರಾಮನಗರ, ಮಾಗಡಿ ಸೇರಿ 42 ಕ್ಷೇತ್ರಗಳಲ್ಲಿ ಅಮಿಷಗಳ ಕೂಪನ್ ಗಳನ್ನು ಕೊಟ್ಟು ಗೆದ್ದ ಕಾಂಗ್ರೆಸ್
ಕಾಂಗ್ರೆಸ್ ಅಕ್ರಮ ನಡೆಸಿ ಚುನಾವಣೆ ಗೆದ್ದಿದೆ:  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ title=

ಬೆಂಗಳೂರು: ಸುಳ್ಳು ಗ್ಯಾರಂಟಿಗಳ ಜತೆಗೆ ಅಕ್ರಮವಾಗಿ ಕೂಪನ್ ಗಳನ್ನು ಹಂಚಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದಲ್ಲಿ 45ರಿಂದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಮಿಸ್ಟರ್ ಸಿದ್ದರಾಮಯ್ಯ ಧೈರ್ಯ ಇದ್ದರೆ ಈ ಅಕ್ರಮವನ್ನು ತನಿಖೆಗೆ ಒಳಪಡಿಸಿ ಎಂದು ಅವರು ಒತ್ತಾಯ ಮಾಡಿದರು.ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾಂಗ್ರೆಸ್ ಪಕ್ಷವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಹಂಚಿದ ಕ್ಯೂ ಆರ್ ಕೊಡ್ ಗಳು ಉಳ್ಳ ಈ ಕೂಪನ್ ಗಳೇ ಕಾರಣ. ಇದು ಗಂಭೀರ ಸ್ವರೂಪದ ಚುನಾವಣೆ ಅಕ್ರಮ ಎಂದು ದೂರಿದರು.

ಮೂರು ಸಾವಿರ ಹಾಗೂ ಐದು ಸಾವಿರ ಮೊತ್ತದ ಕ್ಯೂ ಆರ್ ಕೋಡ್ ಗಳನ್ಜು ಹೊಂದಿರುವ ಕೂಪನ್ ಗಳನ್ನು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಮತದಾರರಿಗೆ ಹಂಚಲಾಯಿತು. ಈ ಕೂಪನ್ ಗಳಿಂದಲೇ ನಾವು ಸೋಲಬೇಕಾಯಿತು. ಕಾಂಗ್ರೆಸ್ ಅಕ್ರಮವಾಗಿ ಗೆದ್ದಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೀರಾ ಮಿಸ್ಟರ್ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಅವರು ಕಿಡಿಕಾರಿದರು.

ಇದನ್ನೂ ಓದಿ: ಹೊಸನಗರದಲ್ಲಿ ಕುಡಿಯುವ ನೀರಿಗೂ ಹಾಹಾಕಾರ.. ಸಗಣಿ ನೀರನ್ನ ಮೈಮೇಲೆ ಎರಚಿಕೊಂಡು ಪ್ರತಿಭಟನೆ

ಹೀಗೆ ಕೂಪನ್ ಗಳನ್ನು ಹಂಚಲು ಕಾಂಗ್ರೆಸ್ ಅಭ್ಯರ್ಥಿಗಳು ಹಣ ಎಲ್ಲಿಂದ ತಂದರು? ಕಾಂಗ್ರೆಸ್ ಅಭ್ಯರ್ಥಿ ಗೆದ್ದರಷ್ಟೇ ಈ ಕೂಪನ್ ನಗದಾಗುತ್ತದೆ. ಆಗ ಕೂಪನ್ ಹೊಂದಿರುವವರು ನಿಗದಿತ ಮಾಲ್ ಅಥವಾ ಅಂಗಡಿಗೆ ಹೋಗಿ ಕೂಪನ್ ನಲ್ಲಿ ನಿಗದಿತ ಮೊತ್ತದ ವಸ್ತುಗಳನ್ನು ಖರೀದಿ ಮಾಡಬಹುದು ಎಂದು ಆಮಿಷ ಒಡ್ಡಲಾಗಿದೆ. ಇದು ಚುನಾವಣೆಯ ಮಹಾ ಅಕ್ರಮ.ಈ ಚುನಾವಣೆ ಆಯೋಗ ತನಿಖೆ ಮಾಡಬೇಕು ಎಂದು ಒತ್ತಾಯ ಮಾಡಿದರು ಮಾಜಿ ಮುಖ್ಯಮಂತ್ರಿಗಳು.

ರಾಮನಗರ, ಮಾಗಡಿ, ರಾಜರಾಜೇಶ್ವರಿ ನಗರ ಸೇರಿದಂತೆ ರಾಜ್ಯದ 45ರಿಂದ 50 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ರೀತಿಯ ಅಕ್ರಮ ಮಾಡಿದೆ. ಬಿಜೆಪಿ ಸರಕಾರದ ಅಕ್ರಮಗಳನ್ನು ತನಿಖೆ ಮಾಡಿಸುವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಈ ಕೂಪನ್ ಅಕ್ರಮದ ಬಗ್ಗೆ ತನಿಖೆ ಮಾಡಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಸುಮಾರು ನಲವತ್ತೆರಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಗಿಫ್ಟ್ ಕೂಪನ್ ಹಂಚಿದ್ದಾರೆ. ಆ ಕೂಪನ್ ಕೊಟ್ಟರೆ, ಮೂರು, ಐದು ಸಾವಿರ ಬೆಲೆಯ ವಸ್ತುಗಳು ಸಿಗುತ್ತೆ  ಅಂತ ಆಸೆ ಹುಟ್ಟಿಸಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಸುಮಾರು ಅರವತ್ತು ಸಾವಿರ ಕೂಪನ್ ಹಂಚಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ ಅವರು, ಮಾಧ್ಯಮಗೋಷ್ಠಿಯಲ್ಲಿ ಗಿಫ್ಟ್ ಕೂಪನ್ ಗಳನ್ನು ಪ್ರದರ್ಶನ ಮಾಡಿದರು.ಪ್ರಜಾಪ್ರಭುತ್ವದಲ್ಲಿ ಗೆಲವು ಗೆಲವೇ. ಆದರೆ, ಮಹಾತ್ಮ ಗಾಂಧೀಜಿ ಹೆಸರು ಹೇಳುವ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಅತ್ಯಂತ ಕೀಳು ಕೆಲಸ ಮಾಡಿದೆ. ಆ ಪಕ್ಷಕ್ಕೆ ನೈತಿಕತೆ ಎನ್ನುವುದು ಇದೆಯಾ ಎಂದು ಅವರು ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಶಾದಿ.ಕಾಮ್ ನಲ್ಲಿ ಪರಿಚಯ,  ಓಯೋದಲ್ಲಿ ಮಜಾ: ಕೊನೆಗೆ ಯುವತಿಗೆ ಕೈಕೊಟ್ಟು ಬೇರೆ ನಿಖಾ ಆದ ಐನಾತಿ!

ನಮ್ಮ ಬಗ್ಗೆ ಕಾಂಗ್ರೆಸ್ ಒಂದು ಟ್ವೀಟ್ ಮಾಡಿದೆ.ಗ್ಯಾರಂಟಿ ಕಾರ್ಯಕ್ರಮಗಳನ್ನು ಈಡೇರಿಸುವುದು ಇರಲಿ, ನೀವು ಪಕ್ಷ ವಿಸರ್ಜನೆ ಯಾವಾಗ ಮಾಡ್ತೀರಾ ಅಂತಾ ಕೇಳಿದೆ. ಹಿಂದೆ ಒಂದು ಚುನಾವಣೆಯಲ್ಲಿ 179 ಸ್ಥಾನದಿಂದ 39 ಸ್ಥಾನಕ್ಕೆ ಇಳಿದಾಗ ಕಾಂಗ್ರೆಸ್ ನಾಯಕರು ಪಕ್ಷ ವಿಸರ್ಜನೆ ಮಾಡಿದ್ದರಾ? ಕಾಲಚಕ್ರ ತಿರುಗುತ್ತೆ, ಮೇಲೆ ಇದ್ದವನು ಕೆಳಗೆ ಇಳಿಬೇಕು, ಕೆಳಗಿದ್ದವನು ಮೇಲೆ ಬರಬೇಕು. ಈ ದುರಹಂಕಾರದ ಮಾತು ಬೇಡ. ಪಕ್ಷ ವಿಸರ್ಜನೆ ಮಾಡುವುದು, ಅಂತ್ಯಸಂಸ್ಕಾರ ಮಾಡುವುದು ಇದೆಲ್ಲಾ ನಾನು ನಿಮ್ಮಿಂದ ಕಲೀಬೇಕಿಲ್ಲ ಎಂದು ಅವರು ಕಿಡಿಕಾರಿದರು.

ನಾನು ಹೇಳಿದ್ದೇನು?:

ನನಗೆ 123 ಸೀಟು ಬಂದು ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೆ. ಆ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಬೇರೆ ರೀತಿ ಕೇಳಿಸಿದೆ. ಒಮ್ಮೆ ಅವರು ನನ್ನ ಹೇಳಿಕೆಯನ್ನು ಮತ್ತೆ ಕೇಳಿಸಿಕೊಳ್ಳಲಿ. ನಾನು ಹೇಳಿದ್ದು ಏನು ಎಂಬುದು ಅರ್ಥ ಆಗುತ್ತದೆ. ಅವರಂಥ ಕುತಂತ್ರದ ರಾಜಕಾರಣ ಮಾಡಿ, ನಾವು ಪಕ್ಷ ಕಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಗೆದ್ದರು ಅನ್ನೋದಕ್ಕಿಂತ ಒಟ್ಟಾರೆ ಗೆದ್ದರು ಅನ್ನುವುದೇ ಮುಖ್ಯ.ಈ ನಾಡಿನ ಜನರ ಮುಂದೆ ಮನವಿ ಮಾಡ್ತೀನಿ. ಒಪ್ಪತ್ತು ಹೊತ್ತಿನ ಊಟದ ಆಸೆಗೆ ನಿಮ್ಮ ಮುಂದಿನ ಭವಿಷ್ಯ ಹಾಳು ಮಾಡಿಕೊಳ್ಳವೇಡಿ. ಒಂದೆರಡು ಸಾವಿರ ಹಣದಿಂದ ನಿಮ್ಮ ಬದುಕು ಸರಿ ಹೋಗುವುದಿಲ್ಲ ಎಂದು ಜನತೆಗೆ ಅವರು ಕಿವಿಮಾತು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News