ಧಾರವಾಡ : ಸರಿಯಾಗಿ ಡಿ.ಟಿ.ಪಿ ಕೋರ್ಸ್ ಕಲಿಸದ ಹುಬ್ಬಳ್ಳಿಯ ಲಾಜಿಕ್ ಕಂಪ್ಯೂಟರ್ ಸಂಸ್ಥೆಗೆ ರೂ.15 ಸಾವಿರಗಳ ದಂಡ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ವಿಧಿಸಿದೆ.
ಹುಬ್ಬಳ್ಳಿಯ ಲೋಹಿಯಾ ನಗರ, ನಿವಾಸಿ ಹಿರಿಯ ನಾಗರಿಕರಾದ ಚನ್ನಬಸಪ್ಪ ಕರಮಡಿ ಎಂಬುವವರು ಹುಬ್ಬಳ್ಳಿಯಲ್ಲಿ ಖಾಸಗಿ ಜಾಬ್ ಟೈಪಿಂಗ್ ಸೆಂಟರ್ ಇಟ್ಟುಕೊಂಡು ಬೆರಳಚ್ಚುಗಾರ ಅಂತಾ ಕೆಲಸ ಮಾಡಿಕೊಂಡಿದ್ದರು, ಇನ್ನೂ ಹೆಚ್ಚಿನ ಕಂಪ್ಯೂಟರ್ ತರಬೇತಿ ಪಡೆಯುವ ನಿಟ್ಟಿನಲ್ಲಿ ವಿದ್ಯಾನಗರ ಹುಬ್ಬಳ್ಳಿಯಲ್ಲಿನ ಲಾಜಿಕ್ ಕಂಪ್ಯೂಟರ್ ಸಂಸ್ಥೆಯವರು ಆಸಕ್ತಿ ಇರುವ ಹಿರಿಯ ನಾಗರಿಕರಿಗೆ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ಕಲ್ಪಿಸಿದ್ದರಿಂದ ದೂರುದಾರ ಸದರಿ ಸಂಸ್ಥೆಗೆ ರೂ.5,000/- ಭರಿಸಿ ಡಿ.ಟಿ.ಪಿ ಕಂಪ್ಯೂಟರ್ ತರಬೇತಿಗೆ ಪ್ರವೇಶ ಪಡೆದಿದ್ದರು.
ಆದರೆ ಸದರಿ ಸಂಸ್ಥೆಯವರು ತನಗೆ ಸರಿಯಾಗಿ ಕಂಪ್ಯೂಟರ್ ತರಬೇತಿ ನೀಡುವಲ್ಲಿ ಸೇವಾ ನ್ಯೂನ್ಯತೆ, ದೋಷಪೂರಿತ ಸೇವೆ ಸಲ್ಲಿಸಿದ್ದಾರೆ ಅಂತಾ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ತನಗೆ ಮೋಸ ಮಾಡಿದ ಲಾಜಿಕ್ ಕಂಪ್ಯೂಟರ್ ಸಂಸ್ಥೆಯವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಎದುರುದಾರರು ಫಿರ್ಯಾದಿ 66 ವರ್ಷಗಳ ಹಿರಿಯ ನಾಗರಿಕರಾಗಿದ್ದು ಅವರಿಗೆ ಹೆಚ್ಚಿನ ಕಾಳಜಿಯಿಂದ ಕಂಪ್ಯೂಟರ್ ತರಬೇತಿ ನೀಡಿದರೂ ಅದನ್ನು ತಿಳಿದುಕೊಳ್ಳುವ ಮಾನಸಿಕ ಶಕ್ತಿ ಇರುವುದಿಲ್ಲ ಕಾರಣ ನಮ್ಮ ಸಂಸ್ಥೆಯ ಘನತೆಗೆ ಚ್ಯುತಿ ಉಂಟುಮಾಡುವ ದೃಷ್ಟಿಯಿಂದ ಈ ಸುಳ್ಳು ದೂರು ದಾಖಲಿಸಿದ್ದು ಅದನ್ನು ವಜಾ ಗೊಳಿಸಬೇಕೆಂದು ಆಯೋಗಕ್ಕೆ ಕೋರಿದ್ದರು.
ಆದರೆ ಎದುರುದಾರರ ಸಂಸ್ಥೆಯ ಆಕ್ಷೇಪಣೆಯನ್ನು ತಳ್ಳಿಹಾಕಿದ ಆಯೋಗ ಪ್ರವೇಶ ಶುಲ್ಕ ಭರಿಸಿಕೊಂಡು ಸರಿಯಾದ ರೀತಿಯಲ್ಲಿ ಕಂಪ್ಯೂಟರ್ ತರಬೇತಿ ನೀಡದೆ ಎದುರುದಾರರು ಫಿರ್ಯಾದಿಗೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಅಂತಾ ಅಭಿಪ್ರಾಯಪಟ್ಟು ಫಿರ್ಯಾದಿಯಿಂದ ಪಡೆದುಕೊಂಡ ಕಂಪ್ಯೂಟರ್ (ಡಿ.ಟಿ.ಪಿ) ಕೋರ್ಸ್ ಪೂರ್ತಿ ಶುಲ್ಕ ರೂ.5,000/-ಗಳನ್ನು ಹಾಗೂ ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.10,000/-ಗಳ ಪರಿಹಾರವನ್ನು ಈ ಆದೇಶ ಮಾಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ತೀರ್ಪು ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.