ತುಮಕೂರು: ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಶಾಸಕರಾದ ಜ್ಯೋತಿಗಣೇಶ್, ಜಿಲ್ಲಾಧಿಕಾರಿಗಳು, APMC ನಿರ್ದೇಶಕರು. ಜಿಲ್ಲಾ ಹಿರಿಯ ಅಧಿಕಾರಿಗಳ ಜೊತೆ ತುಮಕೂರು (Tumkur) ಎಪಿಎಂಸಿಯ ಅಂತರಸನಹಳ್ಳಿ ತರಕಾರಿ ಮತ್ತು ಹೂವು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಸೋಂಕು ನಿವಾರಕ ಟನಲ್ ಅನ್ನು ಸ್ವತಃ ಸಚಿವರೇ ಪ್ರವೇಶಿಸುವ ಮೂಲಕ ಜನಜಾಗೃತಿ ಮೂಡಿಸಿದರು. ವರ್ತಕರು ಹಾಗೂ ರೈತರ ಜೊತೆ ಕೆಲಕಾಲ ಸಮಸ್ಯೆಗಳನ್ನು ಆಲಿಸಿದ ಸಚಿವರು ಮಾರುಕಟ್ಟೆಗೆ ತರಕಾರಿ ಸೇರಿದಂತೆ ಹಣ್ಣುಗಳನ್ನು ಸಾಗಾಟ ಮಾಡುವಾಗ ಪೊಲೀಸರಿಂದ ತೊಂದರೆಯಾಗುತ್ತಿದೆಯೇ ಎಂದು ವಿಚಾರಿಸಿದರು. ಈ ವೇಳೆ ವರ್ತಕರು ಸನ್ಮಾನ ಮಾಡಲು ಮುಂದಾದಾಗ ನಯವಾಗಿಯೇ ನಿರಾಕರಿಸಿದ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ಇಂಥ ಸಂದರ್ಭದಲ್ಲಿ ಸನ್ಮಾನಗಳು ಬೇಡ. ಮೊದಲು ಈ ಸಂಕಷ್ಟಗಳಿಂದ ಪಾರಾದರೆ ಸಾಕು ಎಂದು ತಿಳಿಸಿದರು.
ಬಳಿಕ ಎಪಿಎಂಸಿ ಪ್ರಾಂಗಣದಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು, ರಸ್ತೆ ಹದಗೆಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತ್ವರಿತವಾಗಿ ಸರಿಪಡಿಸುವಂತೆ ಸೂಚಿಸಿದರು. ಅಲ್ಲಿಂದ ನೇರವಾಗಿ ಪ್ರತ್ಯೇಕವಾಗಿ ಇರಿಸಲಾದ ಹೂವಿನ ಮಾರುಕಟ್ಟೆ ಪ್ರವೇಶಿಸಿದ ಸಚಿವರು, ವ್ಯಾಪಾರ ಹಾಗೂ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಹೂವು ಮಾರಾಟಕ್ಕೆ ಅವಕಾಶವಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಈಗ ಮಾಡಿರುವ ವ್ಯವಸ್ಥೆ ಬಗ್ಗೆ ವರ್ತಕರಲ್ಲೇ ನೇರವಾಗಿ ಪ್ರಶ್ನಿಸಿ, ಅಭಿಪ್ರಾಯ ಸ್ವೀಕರಿಸಿದರು.
ಎಪಿಎಂಸಿಗೆ ರೈತರು ನೇರವಾಗಿ ಮಾರಾಟ ಮಾಡುವ ಉದ್ದೇಶದಿಂದಲೇ ಎಲ್ಲೂ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳೂ ಸೂಚಿಸಿದ್ದಾರೆ. ನಾನೂ ಸಹ ಎಲ್ಲ ಎಪಿಎಂಸಿಗಳಿಗೂ ಭೇಟಿ ನೀಡಿ, ಖುದ್ದಾಗಿ ಅಹವಾಲು ಆಲಿಸುತ್ತಿದ್ದೇನೆ. ರೈತರ ಹಾಗೂ ವರ್ತಕರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಸರ್ಕಾರ ಸಿದ್ಧವಿದೆ. ಆ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಎಲ್ಲೆಡೆ ಟನಲ್ ಗೆ ಸೂಚನೆ:
ಎಪಿಎಂಸಿಗಳಲ್ಲಿ ರೈತರಿಗೆ ಎಲ್ಲ ಅನುಕೂಲ ಮಾಡಿಕೊಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸ್ಯಾನಿಟೈಸೇಶನ್, ಮಾಸ್ಕ್ , ಸೋಂಕು ನಿವಾರಕ ಟನಲ್ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿದ್ದೇನೆ. ಎಲ್ಲ ಕಡೆಗಳಲ್ಲೂ ಇದು ಜಾರಿಯಲ್ಲಿದೆ. ಅಲ್ಲದೆ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮಾನ್ಯ ಸಚಿವರು ತಿಳಿಸಿದರು.
ಹೆಚ್ಚಿನ ಬೆಲೆ ಮಾರಾಟ ಆಗುವ ಬಗ್ಗೆ ಪ್ರತಿಕ್ರಿಯಿಸಿ, ಇಂಥ ಪ್ರಕರಣಗಳು ಕಂಡುಬಂದರೆ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ತೂಕದಲ್ಲಿ ಮೋಸ, ಪಡಿತರ ನೀಡದೇ ಇರುವಂಥವರನ್ನು ಸರ್ಕಾರ ಸಹಿಸದು. ಅಂತಾರಾಜ್ಯ ಮಾರಾಟಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂಥ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಲಾಗಿದೆ. ಆಂಧ್ರ ಪೊಲೀಸರು ಈಗಾಗಲೇ ರೈತರಿಗೆ ಹೋಗಲು ಅನುವು ಮಾಡಿಕೊಡುತ್ತಿದ್ದಾರೆ. ಸಮಸ್ಯೆ ಇದ್ದರೆ ಮಾತನಾಡಿ ಬಗೆಹರಿಸುವೆ ಎಂದು ಸಚಿವರು ತಿಳಿಸಿದರು.
ಮೈಸೂರಲ್ಲಿ ನಿಯಂತ್ರಣಕ್ಕೆ ಕೊರೋನಾ :
ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಶೀಘ್ರ ಜಿಲ್ಲೆ ಕೊರೋನಾ ಮುಕ್ತವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.