ಬೆಂಗಳೂರು : ರಾಜ್ಯ ಸರ್ಕಾರ ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ನ್ಯಾಯಾಲಯದ ಆದೇಶ ಗೌರವಿಸಿ, ಅದನ್ನು ಪಾಲಿಸಿದ್ದೇವೆ. ಜೊತೆಗೆ ನಮ್ಮ ರೈತರ ಹಿತವನ್ನು ಕಾಯಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತನ್ನ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸ ಹಾಗೂ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿ ಶಿವಕುಮಾರ್ ಅವರು ಹೀಗೆ ಹೇಳಿದರು. ಕಾವೇರಿ ವಿಚಾರದಲ್ಲಿ ನಾವು ಕಾನೂನು, ಸಂವಿಧಾನ ಹಾಗೂ ಕೋರ್ಟ್ ಆದೇಶಕ್ಕೆ ಗೌರವ ನೀಡಬೇಕು. ಈ ಹಿಂದೆ ಇದ್ದ ಸರ್ಕಾರಗಳು ನ್ಯಾಯಾಲಯದ ಆದೇಶಗಳನ್ನು ಇದೇ ರೀತಿ ಪಾಲಿಸಿವೆ. ನೀರು ಬಿಡುಗಡೆ ಮಾಡಿವೆ. ಆದರೆ ನಮ್ಮ ರೈತರ ಹಿತ ಕಾಪಾಡುವುದು ನಮ್ಮ ಮೇಲಿರುವ ದೊಡ್ಡ ಜವಾಬ್ದಾರಿ. ನೀರು ಬಿಟ್ಟಿರುವುದನ್ನು ಪ್ರಶ್ನಿಸಿ ವಿರೋಧ ಮಾಡುತ್ತಾರೆ. ಅದು ಸಹಜ. ಸರ್ಕಾರ ಇಂತಹ ಸಮಯದಲ್ಲಿ ಸಮತೋಲಿತವಾಗಿ ಕೆಲಸ ಮಾಡಬೇಕಿದೆ. ಮಳೆ ಕಡಿಮೆ ಆಗಿರುವುದರಿಂದ ಕೃಷಿಗೆ ಮಾತ್ರವಲ್ಲ, ಕುಡಿಯಲು ನೀರಿಲ್ಲ. ಇದೇ ಕಾರಣಕ್ಕೆ ಪ್ರಾಧಿಕಾರಕ್ಕೆ ತನ್ನ ನಿರ್ಧಾರ ಪುನರ್ ಪರಿಶೀಲಿಸಲು ಮನವಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ರಾಜ್ಯದ 48 ಸ್ಥಳಗಳಲ್ಲಿ ಲೋಕಾಯುಕ್ತ ಮೆಗಾ ರೇಡ್
ಈ ಹಿಂದೆ ಇಂತಹ ಪರಿಸ್ಥಿತಿಯಲ್ಲಿ ಜನತಾ ದಳ ಹಾಗೂ ಬಿಜೆಪಿ ಸರ್ಕಾರಗಳು ಎಷ್ಟು ನೀರು ಬಿಟ್ಟಿದ್ದವು ಎಂಬ ಅಂಕಿ ಅಂಶ ನೀಡಬಲ್ಲೆ. ಆದರೆ ಈ ವಿಚಾರದಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ. ಕಾವೇರಿ, ಮಹಾದಾಯಿ, ಕೃಷ್ಣಾ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯಲು ಆಲೋಚಿಸಿದ್ದೇವೆ. ಕೇಂದ್ರದಲ್ಲಿ ಬಲಿಷ್ಠ ಸರ್ಕಾರ ಅಧಿಕಾರದಲ್ಲಿದ್ದರೂ ಮಹಾದಾಯಿ, ಕೃಷ್ಣ ವಿಚಾರ ಇತ್ಯರ್ಥವಾಗಿಲ್ಲ. ಈ ಬಗ್ಗೆಯೂ ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಜನರಿಗೆ ಕೊಟ್ಟ ಮಾತಿನಂತೆ ಎನ್ಇಪಿ ರದ್ದು: ಎನ್ಇಪಿ ರದ್ದು ವಿಚಾರವಾಗಿ ಕೇಳಿದ ಪ್ರಶ್ನೆಗೆ, "ನಾವು ಎನ್ಇಪಿ ಜಾರಿ ಆರಂಭದಲ್ಲೇ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರದ್ದು ಮಾಡುವುದಾಗಿ ಹೇಳಿದ್ದೆವು. ಈಗ ಆ ಬಗ್ಗೆ ಚಿಂತನೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಬಹಳ ತರಾತುರಿಯಲ್ಲಿ ಮೂಲಸೌಕರ್ಯ ಇಲ್ಲದೆ ಇದನ್ನು ಜಾರಿಗೆ ತಂದಿತ್ತು. ಈ ಎನ್ಇಪಿಯನ್ನು ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ಜಾರಿ ಮಾಡಿದರು? ಬಿಜೆಪಿ ಸರ್ಕಾರ ಇರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಹರ್ಯಾಣ ಹಾಗೂ ಗುಜರಾತ್ ನಲ್ಲಿ ಯಾಕೆ ಮಾಡಲಿಲ್ಲ? ನಮ್ಮಲ್ಲಿರುವ ಶಿಕ್ಷಣ ವ್ಯವಸ್ಥೆ ಸರಿ ಇರಲಿಲ್ಲವೇ? ಇಡೀ ಪ್ರಪಂಚದಲ್ಲಿನ ಜನ ಬೆಂಗಳೂರನ್ನು ಐಟಿ, ಶಿಕ್ಷಣ ರಾಜಧಾನಿ, ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ. ನಮ್ಮಲ್ಲಿರುವ ಶಿಕ್ಷಣ ಗುಣಮಟ್ಟ ಇದಕ್ಕೆ ಕಾರಣ. ಎನ್ಇಪಿಯಲ್ಲಿ ಉತ್ತಮ ಅಂಶ ಇದ್ದರೆ ಅದನ್ನು ಪರಿಗಣಿಸುತ್ತೇವೆ. ಇದು ಬಿಜೆಪಿಯ ರಾಜಕೀಯ ಅಜೆಂಡಾ. ಎನ್ಇಪಿ ಎಂದರೆ ನಾಗಪುರ ಶಿಕ್ಷಣ ನೀತಿ ಆಗಿದೆ. ಶಿಕ್ಷಣ ರಾಜ್ಯ ವ್ಯಾಪ್ತಿ ವಿಚಾರವೇ ಹೊರತು ಕೇಂದ್ರ ಸರ್ಕಾರದ ವಿಚಾರವಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಪೊಲೀಸ್ ಅಧಿಕಾರಿಯಾದ ಎಂಟುವರೆ ವರ್ಷದ ಬಾಲಕ
ಪಕ್ಷದ ಮತ ಪ್ರಮಾಣ ಹೆಚ್ಚಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಸಂದೇಶ : ಬೇರೆ ಪಕ್ಷದವರು ಕಾಂಗ್ರೆಸ್ ಸೇರುವ ವಿಚಾರವಾಗಿ ಕೇಳಿದಾಗ, "ಪಕ್ಷದ ಮತ ಪ್ರಮಾಣ ಹೆಚ್ಚಿಸಿಕೊಳ್ಳಿ ಎಂದು ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡಿದ್ದೇವೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಸೇರ್ಪಡೆ ಮಾಡಿಕೊಳ್ಳಲು ತಿಳಿಸಿದ್ದೇನೆ. ಉಳಿದಂತೆ ನನ್ನವರೆಗೂ ಯಾರದೇ ಪಕ್ಷ ಸೇರ್ಪಡೆ ವಿಚಾರ ಬಂದಿಲ್ಲ" ಎಂದು ತಿಳಿಸಿದರು.
ನೀವು ಬೇರೆ ಪಕ್ಷದ ಶಾಸಕರ ಜೊತೆ ಖುದ್ದಾಗಿ ಮಾತನಾಡಿದ್ದೀರಿ ಎಂಬ ಮಾತಿದೆಯಲ್ಲ ಎಂದು ಕೇಳಿದಾಗ, "ನಿಮ್ಮ ಮಾಹಿತಿ ಸಂಪೂರ್ಣ ಸುಳ್ಳು. ಬಿಜೆಪಿಯವರು ಯಾರ ಜೊತೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ನೀವು ಚರ್ಚೆ ಮಾಡುತ್ತಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅವರು ಭಾವಿಸಿದ್ದಾರೆ. ಅವರು ಕಲಿಸಿ ಕೊಟ್ಟಿರುವ ಪಾಠ ನಮಗೆ ನೆನಪಿದೆ. ಜನ ನಮಗೆ 135 ಸಂಖ್ಯಾಬಲ ನೀಡಿದ್ದಾರೆ. ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಬಿಜೆಪಿ ಹಾಗೂ ದಳದವರಿಗೆ ನೆಮ್ಮದಿ ಇಲ್ಲ. ಅದಕ್ಕೆ ಅವರೇ ಔಷಧಿ ಕಂಡುಕೊಳ್ಳಬೇಕು. ಗೆದ್ದಿರುವವರು, ಸೋತಿರುವವರು ಮಾತನಾಡುತ್ತಿದ್ದಾರೆ. ಯಾರು ಏನು ಮಾತನಾಡುತ್ತಿದ್ದಾರೆ ಎಂದು ನಾವು ಗಮನಿಸುತ್ತಿದ್ದೇವೆ. ನಾವು ಯಾರ ಮಾತಿಗೂ ಬೀಗ ಹಾಕುವುದಿಲ್ಲ" ಎಂದು ತಿಳಿಸಿದರು.
ಬಿಜೆಪಿ ನಾಯಕರು ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ, "ತಾವು ರಾಜಕೀಯವಾಗಿ ಬದುಕಿದ್ದೇವೆ ಎಂದು ಸಾಬೀತುಪಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ" ಎಂದು ತಿಳಿಸಿದರು. ಅಲ್ಲದೆ ಜೆಡಿಎಸ್ ನ 13 ಶಾಸಕರು ನಿಮ್ಮ ಸಂಪರ್ಕದಲ್ಲಿದ್ದು, ಮುಂದೆ ಅವರು ನಿಮಗೆ ಬೆಂಬಲ ನೀಡಲಿದ್ದಾರೆ ಎಂಬ ಮಾಹಿತಿ ಇದೆಯಲ್ಲ ಎಂಬ ಪ್ರಶ್ನೆಗೆ, "ಈ ವಿಚಾರ ನನಗೆ ಗೊತ್ತಿಲ್ಲ. ನಿಮ್ಮಿಂದಲೇ ಈಗ ಮಾಹಿತಿ ಕೇಳುತ್ತಿದ್ದೇನೆ. ನನಗೆ 224 ಶಾಸಕರು ಪರಿಚಯಸ್ಥರು. ಎಲ್ಲರ ಜತೆ ರಾಜಕೀಯವಾಗಿ ಅಲ್ಲದಿದ್ದರೂ ವೈಯಕ್ತಿಕ ಸಂಬಂಧ ಇದೆ. ಅವರ ಹೆಸರಿಗೆ ನಾವು ಧಕ್ಕೆ ಯಾಕೆ ತರೋಣ?" ಎಂದು ತಿಳಿಸಿದರು.
ಇದನ್ನೂ ಓದಿ:ಬಿಜೆಪಿಯವರು ಸ್ಥಳೀಯವಾಗಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ ಎಂದ ಎಸ್ಟಿ ಸೊಮಶೇಖರ್
ಪಕ್ಷ ಬಿಟ್ಟು ಹೋದವರು ಬಂದರೆ ಪಕ್ಷದ ಬಾಗಿಲು ತೆರೆದಿರುತ್ತದೆಯೇ ಎಂದು ಕೇಳಿದಾಗ, "ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು" ಎಂದು ತಿಳಿಸಿದರು. 40% ಕಮಿಷನ್ ವಿಚಾರ ತನಿಖೆಗೆ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ರಚನೆ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ನಾನು ಏನನ್ನೂ ಹೇಳುವುದಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಉತ್ತರ ನೀಡಲಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ತನಿಖೆಗೆ ಸಮಿತಿ ರಚನೆ ಮಾಡಿದ್ದು, ಅವರು ತನಿಖೆ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.