ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ರಾಜ್ಯದ ಜನರಿಗೆ ಕೊಂಚ ನಿರಾಳತೆ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ 36.4 ಟಿಎಂಸಿ ನೀರನ್ನು ಕೇಳಿತ್ತು. ಆದರೆ, ನ್ಯಾಯಾಧಿಕರಣ 13.5 ಟಿಎಂಸಿ ನೀರು ಹಂಚಿಕೆ ಮಾಡಿ, ತೀರ್ಪು ನೀಡಿದೆ. ಇಷ್ಟು ವರ್ಷದ ಹೋರಾಟಕ್ಕೆ ಈ ತೀರ್ಪು ಸ್ವಲ್ಪ ಮಟ್ಟಿಗೆ ನಿರಾಳತೆ ನೀಡಿದೆ. ಆದರೆ ಇನ್ನು 10 ಟಿಎಂಸಿ ನೀರು ಹೆಚ್ಚುವರಿ ನೀಡಿದ್ದರೆ ಸಂತೋಷವಾಗುತ್ತದೆ. ಈ ತೀರ್ಪಿನ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ, ಮರುಅರ್ಜಿ ಸಲ್ಲಿಕೆ ಬಗ್ಗೆಯೂ ಚಿಂತನೆ ಮಾಡಲಾಗುವುದು ಎಂದರು.
ಹಲವು ವರ್ಷದಿಂದ ಮಹದಾಯಿ ವಿಚಾರವಾಗಿ ಸಾಕಷ್ಟು ಹೋರಾಟ, ಸಭೆ ನಡೆದಿದೆ. ಈ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೇಳಿದ್ದೆವು. ಆದರೆ ಅವರು ನ್ಯಾಯಾಲಯದ ಮುಂದೆ ಹೋಗುವಂತೆ ಹೇಳಿದ್ದರು.
ಗೋವಾ ಸರ್ಕಾರ ಈ ತೀರ್ಪಿಗೆ ಬೇಸರ ವ್ಯಕ್ತಪಡಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೋವಾಗೆ 24 ಟಿಎಂಸಿ ನೀರು ಹಂಚಿಕೆ ಮಾಡಿದೆ. ಅವರು ಈ ತೀರ್ಪಿಗೆ ತೃಪ್ತಿ ಪಟ್ಟುಕೊಳ್ಳಬೇಕು ಎಂದು ಹೇಳಿದರು.