close

News WrapGet Handpicked Stories from our editors directly to your mailbox

ಸಚಿವ ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ!

ಹಳೇ ಮೈಸೂರು, ದಕ್ಷಿಣ ಕನ್ನಡ, ಉತ್ತರಕನ್ನಡ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದ ಹಿನ್ನೆಲೆಯಲ್ಲಿ ಹಲವು ಶಾಸಕರಿಗೆ ನಿರಾಶೆ ಉಂಟಾಗಿದೆ. ‌

Yashaswini V Yashaswini V | Updated: Aug 20, 2019 , 01:44 PM IST
ಸಚಿವ ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ!

ಬೆಂಗಳೂರು: ಬಿಜೆಪಿ ಸರ್ಕಾರದ ನೂತನ ಸಚಿವರಾಗಿ ಇಂದು 17 ಶಾಸಕರು ಪದಗ್ರಹಣ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನದ ಜ್ವಾಲಾಮುಖಿ ಸ್ಫೋಟಗೊಂಡಿದೆ. 

ಹೌದು… ನೂತನ ಸಚಿವರ ಪ್ರಮಾಣವಚನ ಸಮಾರಂಭದ ಬಳಿಕ, ಇದೀಗ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಹೀಗಾಗಿ ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಅನೇಕ ಅತೃಪ್ತ ಶಾಸಕರು ಗೈರು ಹಾಜರಾಗಿದ್ದಾರೆ. 

ಹಳೇ ಮೈಸೂರು, ದಕ್ಷಿಣ ಕನ್ನಡ, ಉತ್ತರಕನ್ನಡ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದ ಹಿನ್ನೆಲೆಯಲ್ಲಿ ಹಲವು ಶಾಸಕರಿಗೆ ನಿರಾಶೆ ಉಂಟಾಗಿದೆ. ‌

ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕರು:
* ಬಾಲಚಂದ್ರ ಜಾರಕಿಹೊಳಿ
* ಜಿ.ಹೆಚ್. ತಿಪ್ಪಾರೆಡ್ಡಿ
* ಉಮೇಶ್ ಕತ್ತಿ
* ಎಂ.ಪಿ.ರೇಣುಕಾಚಾರ್ಯ
* ಎಂ.ಪಿ. ಕುಮಾರಸ್ವಾಮಿ
* ಬಸನಗೌಡ ಪಾಟೀಲ್ ಯತ್ನಾಳ್
* ರವೀಂದ್ರನಾಥ್
* ಮುರುಗೇಶ್ ನಿರಾಣಿ
* ಚಂದ್ರಪ್ಪ
* ಎಸ್. ಅಂಗಾರ
* ದತ್ತಾತ್ರೇಯ ಪಾಟೀಲ್ ರೇವೂರ
* ಅಪ್ಪಚ್ಚುರಂಜನ್
* ಸಿ.ಪಿ. ಯೋಗೇಶ್ವರ್
* ಗೂಳಿಹಟ್ಟಿ ಶೇಖರ್
* ಮಾಡಾಳ್ ವಿರೂಪಾಕ್ಷಪ್ಪ
* ಎಸ್. ಎ. ರಾಮದಾಸ್
* ಕೆ.ಪೂರ್ಣಿಮಾ 

ಈ ಮೊದಲಾದ ಶಾಸಕರು ಸೇರಿದಂತೆ ಹಲವರು ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದಲ್ಲದೇ ಇನ್ನೂ ಕೆಲವು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ: ದತ್ತಾತ್ರೇಯ ಪಾಟೀಲ್ ರೇವೂರ್
ಸಚಿವ ಸ್ಥಾನ ಕೈ ತಪ್ಪಿದ ಕುರಿತು ಪ್ರತಿಕ್ರಿಯೆ ನೀಡಿರುವ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು, ಆದರೆ ಸಿಕ್ಕಿಲ್ಲ. ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಸರವೇನೂ ಇಲ್ಲ. ಮುಂದಿನ ಬಾರಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬಕ್ಕೆ ಸಂಪುಟದಲ್ಲಿ ಸಿಗದ ಸ್ಥಾನ:
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜಾರಕಿಹೊಳಿ ಕುಟುಂಬದ ಸಹೋದರರು ಸಚಿವರಾಗುವುದು ಸಾಮಾನ್ಯ. ಕಳೆದ 15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬಕ್ಕೆ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ.

ಮೈತ್ರಿ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಮಂತ್ರಿಗಳಾಗಿದ್ದರು. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ಕೈತಪ್ಪಿದೆ. 

ಬೆಳಗಾವಿಯ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗಲಿದೆ ಎಂಬ ವಿಶ್ವಾಸದಿಂದ ಬೆಂಗಳೂರಿಗೆ ಬಂದಿದ್ದ ಅವರ ಸಾಕಷ್ಟು ಅಭಿಮಾನಿಗಳಿಗೆ ಇದರಿಂದ ನಿರಾಸೆ ಉಂಟಾಗಿದೆ.

ಆರು ಬಾರಿ ಶಾಸಕನಾದರೂ ಸಚಿವ ಸ್ಥಾನ ಸಿಕ್ಕಿಲ್ಲ: ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ
ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, 'ಆರು ಬಾರಿ ಶಾಸಕನಾಗಿ ಆಯ್ಕೆಯಾದರೂ ನನಗೆ ಸಚಿವ ಸ್ಥಾನ ಸಿಗದೇ ಅನ್ಯಾಯವಾಗಿದೆ. ಹಿರಿತನ, ಪಕ್ಷನಿಷ್ಠೆ ಗುರುತಿಸಿ ಮಂತ್ರಿಗಿರಿ ನೀದದ್ದಕ್ಕೆ ಬೇಸರವಾಗಿದೆ. ಈ ಬಾರಿ ನನ್ನನ್ನು ಪಕ್ಷದ ಮುಖಂಡರು ಕಡೆಗಣಿಸಿದ್ದಾರೆ. ಹೊರಗಿನವರೇ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದಾರೆ' ಎಂದು ಅಳಲು ತೋಡಿಕೊಂಡಿದ್ದಾರೆ.

ಸಚಿವ ಸ್ಥಾನ ವಂಚಿತ ತಿಪ್ಪಾರೆಡ್ಡಿ ಬೆಂಬಲಿಗರು ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯ ರಸ್ತೆಯಲ್ಲಿ ಬೈಕ್ ಗೆ ಬೆಂಕಿಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿಗೆ ಹೋಗಿ ತಪ್ಪು ಮಾಡಿದೆ ಅನಿಸುತ್ತಿದೆ: ಗೂಳಿ ಹಟ್ಟಿ ಶೇಖರ್
ಬಿಜೆಪಿಗೆ ಹೋಗಿ ತಪ್ಪು ಮಾಡಿದೆ ಅನಿಸುತ್ತಿದೆ. ಅದಕ್ಕೆ ತಕ್ಕ ಶಿಕ್ಷೆಯಾಗಿದೆ. ಮುಲಾಜಿಗೆ ಬಿದ್ದು ನಾಶವಾದೆ. 
ಪಕ್ಷೇತರ ಶಾಸಕನಾಗಿ ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬಂದವ ನಾನು. ಈಗ ಆ ಕ್ಷೇತ್ರದಿಂದ ಟಿಕೆಟ್ ಕೊಟ್ಟಿದ್ದನ್ನೇ ಬಿಜೆಪಿಯವರು ದೊಡ್ಡದಾಗಿ ಹೇಳಿಕೊಳ್ಳುತ್ತಾರೆ. 2008 ರಲ್ಲಿ ಸರ್ಕಾರ ರಚನೆ ಮಾಡಲು ಬಿಟ್ಟಿಯಾಗಿ ನಾನು ಬೆಂಬಲ ಕೊಟ್ಟಿರಲಿಲ್ಲವೇ ಎಂದು ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಬಗ್ಗೆ ಹೆಜ್ಜೆ ಹೆಜ್ಜೆಗೆ ಅನುಮಾನಪಟ್ಟರು, ತೀವ್ರ ಹಿಂಸೆ, ಮಾನಸಿಕ ವೇದನೆ ನೀಡಿದರು. ರೆಸಾರ್ಟ್‌ ನಲ್ಲಿ ನನ್ನ ಮೊಬೈಲ್ ಫೋನ್ ಇನ್ ಕಮಿಂಗ್ ಕಾಲ್ ಬ್ಲಾಕ್ ಮಾಡಿಸಿದ್ದರು. ಇವರು ಮುಂದೆಯೂ ನನಗೆ ಮಂತ್ರಿ ಮಾಡುವು ನಂಬಿಕೆಯಿಲ್ಲ. ನನಗೆ ಹೈಕಮಾಂಡ್ ನಲ್ಲಿ ಯಾರದೂ ಪರಿಚಯ ಇಲ್ಲ. ಯಡಿಯೂರಪ್ಪ ಅವರನ್ನು ನಂಬಿ ಹೋಗಿದ್ದೆ. ನನಗೆ ನೋವಾಗಿದೆ. ರಾಜಕೀಯವೇ ಬೇಡ ಅನಿಸಿದೆ ಎಂದು ಗೂಳಿಹಟ್ಟಿ ಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ನನಗೆ ಸಚಿವ ಸ್ಥಾನ ಕೈತಪ್ಪಿರೋದು ಕೊಡವ ಸಮಾಜಕ್ಕೆ ಆದ ಅವಮಾನ: ಶಾಸಕ ಅಪ್ಪಚ್ಚುರಂಜನ್
ನನಗೆ ಸಚಿವ ಸ್ಥಾನ ಕೈತಪ್ಪಿರೋದು ಕೊಡವ ಸಮಾಜಕ್ಕೆ ಆದ ಅವಮಾನ ಎಂದು ಶಾಸಕ ಅಪ್ಪಚ್ಚುರಂಜನ್ ಹೇಳಿಕೆ ನೀಡಿದ್ದಾರೆ. ಸಚಿವ ಸಂಪುಟದಲ್ಲಿ ಪ್ರಾಮಾಣಿಕರು, ಪಕ್ಷ ನಿಷ್ಟರನ್ನು ಕಡೆಗಣಿಸಿದ್ದಾರೆ. ನಾನು ವ್ಯಕ್ತಿ ‌ನಿಷ್ಟೆಗೆ ಮಣೆ ಹಾಕಲ್ಲ. ಪಕ್ಷ ನಿಷ್ಟೆಯಾಗಿದ್ದೇವೆ. ಸಚಿವರ ಪಟ್ಟಿ ಹೈಕಮಾಂಡ್ ಮಾಡಿಲ್ಲ. ಎಲ್ಲಾ ರಾಜ್ಯ ನಾಯಕರೇ ಅಂತಿಮ ಮಾಡಿದ್ದಾರೆ. ಕೊಡವ ಸಮಾಜ ಬಹುದೊಡ್ಡ ಸಂಖ್ಯೆಯಲ್ಲಿ  ಬಿಜೆಪಿಯನ್ನು ಬೆಂಬಲಿಸಿದ್ದರೂ ನಮಗೆ ಅವಕಾಶ ನೀಡದೆ ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.